
ಇಂದು ನಡೆದ ಟಿ20 ವಿಶ್ವಕಪ್ ಸೂಪರ್ 12ರ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನಕ್ಕೆ ಆಘಾತಕಾರಿ ಸೋಲುಣಿಸಿದೆ. ಸತತ ಎರಡನೇ ಸೋಲು ಕಂಡಿರುವ ಪಾಕಿಸ್ತಾನದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ. ಗೆಲ್ಲಲು 131 ರನ್‌ಗಳ ಸಾಧಾರಣ ಗುರಿ ಪಡೆದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್‌ಗಳನ್ನಷ್ಟೆ ಗಳಿಸಲು ಸಾಧ್ಯವಾಯಿತು. ಆ ಮೂಲಕ 1 ರನ್‌ಗಳ ಸೋಲೊಪ್ಪಿಕೊಂಡಿತು. ಕೊನೆಯ ಓವರ್‌ನಲ್ಲಿ ಗೆಲ್ಲಲು ಪಾಕಿಸ್ತಾನಕ್ಕೆ 11 ರನ್‌ಗಳ ಅಗತ್ಯವಿತ್ತು. ಬ್ರಾಡ್ ಇವನ್ ಎಸೆದ ಮೊದಲ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ನವಾಜ್ 3 ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಮೊಹಮ್ಮದ್ ವಾಸಿಂ ಬೌಂಡರಿ ಗಳಿಸಿದರು. ಅಲ್ಲಿಗೆ ನಾಲ್ಕು ಎಸೆತಗಳಲ್ಲಿ 4 ರನ್ ಮಾತ್ರ ಅಗತ್ಯವಿತ್ತು. ಮೂರನೇ ಎಸೆತದಲ್ಲಿ ಮೊಹಮ್ಮದ್ ವಾಸಿಂ 1 ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ಮೊಹಮ್ಮದ್ ನವಾಜ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಐದನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ಕೊನೆ ಬಾಲ್‌ನಲ್ಲಿ ಪಾಕಿಸ್ತಾನ 3 ರನ್ ಗಳಿಸಬೇಕಿತ್ತು. ಶಾಹೀನ್ ಅಫ್ರಿದಿ ಸ್ಟ್ರೈಕರ್‌ನಲ್ಲಿದ್ದರು. ನೇರ ಹೊಡೆದ ಬಾಲ್ ಫೀಲ್ಡರ್ ಕೈ ತಲುಪಿತು. ಎರಡನೇ ರನ್ ಓಡುತ್ತಿದ್ದ ಶಾಹೀನ್ ಅಫ್ರಿದಿ ರನ್ ಔಟಾದರು. ಅಲ್ಲಿಗೆ ಜಿಂಬಾಬ್ವೆ 1 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು.

