
ಸಂತ ಸಮಿತಿಯ ನೇತೃತ್ವದಲ್ಲಿ ರಾಮರಾಜ್ಯ ನಿರ್ಮಾಣದ ಕಲ್ಪನೆಯೊಂದಿಗೆ ದೇಶದಾದ್ಯಂತ ಸಂಚರಿಸಲಿರುವ ಅಯೋಧ್ಯೆ ಪ್ರಭು ಶ್ರೀರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ನವೆಂಬರ್ 7ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ಪೂರ್ಣಕುಂಭದೊಂದಿಗೆ ಯಾತ್ರೆಯನ್ನು ಸ್ವಾಗತಿಸಲಾಗುವುದು. ಬಳಿಕ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದೆ ಎಂದು ದಿಗ್ವಿಜಯ ಯಾತ್ರೆಯ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ತಿಳಿಸಿದ್ದಾರೆ. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭಾ ಕಾರ್ಯಕ್ರಮದಲ್ಲಿ ಸಂತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶಕ್ತಿ ಶಾಂತಾನಂದ ಸ್ವಾಮೀಜಿ, ಪೇಜಾವರ ಮಠದ ಮಠಾಧೀಶರು ಆಗಿರುವ ರಾಮಮಂದಿರದ ವಿಶ್ವಸ್ಥ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು. ದಿಗ್ವಿಜಯ ರಥಯಾತ್ರೆಯಲ್ಲಿ ಬರುವ ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲು ಭಕ್ತಾಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಅಭಿಷೇಕ ಮಾಡಲು ಶುದ್ಧ ಗೋವಿನ ಹಾಲು ತರಬೇಕು ಎಂದು ತಿಳಿಸಿದರು. ಸಂತೆಕಟ್ಟೆಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಬ್ರಹತ್ ವಾಹನ ಜಾಥಾದ ಮೂಲಕ ಕಾರು ಮತ್ತು ಬೈಕ್ ನಲ್ಲಿ ಸಾಗಿಕೊಂಡು ಯಾತ್ರೆಯು ಸಮಾಪನಗೊಳ್ಳಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷರಾದ ಮನೋಹರ್ ಶೆಟ್ಟಿ ತೋನ್ಸೆ, ರಾಮಪೂಜಾರಿ ಸಂತೆಕಟ್ಟೆ, ಮಹಿಳಾ ಪ್ರಮುಖ್ ತಾರಾ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.

