ಶಿರ್ವ, ಏಪ್ರಿಲ್ 2: ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಪುಟಾಣಿಗಳ ಪದವಿ ಪ್ರದಾನ ಸಮಾರಂಭವು ಏಪ್ರಿಲ್ 2ರಂದು ಬಹಳ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಿಸ್ ಫಾತಿಮಾ ಅಝ್ಬಾ ಕಾರ್ಯಕ್ರಮವನ್ನು ಉದ್ಘಾಟಿಸಿ , ಪುಟಾಣಿಗಳಿಗೆ ಪದವಿ ಪ್ರಧಾನ ಮಾಡಿ ಅಭಿನಂದಿಸಿ, ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಿ, ಶ್ರಮ ಮತ್ತು ಸತ್ಯನಿಷ್ಠೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಪ್ರೇರೇಪಿಸಿದರು ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸಿದರು. ಪೋಷಕರಿಗೂ ಶುಭಾಶಯಗಳನ್ನು ಕೋರಿದರು.
ವಿದ್ಯಾರ್ಥಿಗಳ ಮುಖದಲ್ಲಿ ಕಾಣಿಸಿದ ಸಂತೋಷ ಮತ್ತು ಹೆಮ್ಮೆ ಎಲ್ಲರ ಮನಸ್ಸನ್ನು ಹರ್ಷಗೊಳಿಸಿತು.
ಸಮಾರಂಭದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಖೈರುನ್ನಿಸಾ,ಶಾಲಾ ಧರ್ಮಗುರುಗಳಾದ ಮೌಲಾನ ಹಸನ್ ನದ್ವಿ ಹಾಗೂ ಶಾಲಾ ಸಮನ್ವಯಕರಾದ ಶ್ರೀಮತಿ ಅಫ್ಸಾ ಬಿ.ಬಿ. ಸಯ್ಯದ್ ಅವರು ಉಪಸ್ಥಿತರಿದ್ದರು. ಶಿಕ್ಷಕ-ಶಿಕ್ಷಕಿಯರ ಬಳಗ ಮತ್ತು ಪೋಷಕರು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಆಯಿಶತ್ ಶಬಾನ ಅವರು ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಮರಿಯಂ ಅವರು ಸ್ವಾಗತಿಸಿ,ಸಹ ಶಿಕ್ಷಕಿ ಶ್ರೀಮತಿ ಮನೀಷಾ ಅವರು ಧನ್ಯವಾದಗೈದರು.

