×
Our website is made possible by displaying online advertisements to our visitors. Please consider supporting us by whitelisting our website.
  • 9880645340

ನನ್ನ ರಾಜಕೀಯ ನಿವೃತ್ತಿ ಅಪೇಕ್ಷಿಸುವವರು, ರಾಜಕೀಯವಾಗಿ ನನ್ನನ್ನು ಎದುರಿಸುವ ಎದೆಗಾರಿಕೆ ತೋರಿಸಲಿ : ಸೊರಕೆ

ಪ್ರಸಕ್ತ ನಾನು ಚುನಾಯಿತ ಜನಪ್ರತಿನಿಧಿಯಾಗಿರದಿದ್ದರೂ ಮಾಜಿ ಜನಪ್ರತಿನಿಧಿ ಎಂಬ ನೆಲೆಯಲ್ಲಿ ಪ್ರತೀ ದಿನ ನೂರಾರು ಸಾರ್ವಜನಿಕರು ನನ್ನಲ್ಲಿಗೆ ಸಹಕಾರ ಯಾಚಿಸಿಕೊಂಡು, ಸಮಸ್ಯೆಗಳಿಗೆ ಪರಿಹಾರ ಕೇಳಿಕೊಂಡು ಬರುತ್ತಾರೆ. ಬಂದವರನ್ನು ಯಾವ ಜಾತಿ.. , ಯಾವ ಪಕ್ಷ ಎಂದು ಕೇಳದೆ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರಿಗೆ ನೆರವಾಗುತ್ತಿದ್ದೇನೆ. ಇದನ್ನು ಅರಗಿಸಿಕೊಳ್ಳಲಾಗದೆ ಹತಾಶರಾದ ಬಿ. ಜೆ.ಪಿ ಗರು ನನ್ನನ್ನು ರಾಜಕೀಯ ನಿವೃತ್ತಿ ಹೊಂದಲು ಅಪೇಕ್ಷಿಸುತ್ತಿದ್ದಾರೆ. ಜನಸೇವೆ ಮಾಡಲು ಅಧಿಕಾರ ಇರಬೇಕು ಅಥವಾ ಜನಪ್ರತಿನಿಧಿಯೇ ಆಗಿರ ಬೇಕೆಂದಿಲ್ಲ. ಜನಪರ ಕಾಳಜಿ ಮತ್ತು ಜನಸೇವೆ ಮಾಡುವ ತುಡಿತವಿರಬೇಕು. ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಕಪ್ಪುಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ. ನಾನು ನನ್ನ ಜೀವನದ ಕೊನೆಯುಸಿರು ಇರುವ ತನಕ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ ಮತ್ತು ಜನಸೇವೆ ಮಾಡುತ್ತೇನೆ. ನನ್ನ ರಾಜಕೀಯ ನಿವೃತ್ತಿಯನ್ನು ಅಪೇಕ್ಷಿಸುವ ನನ್ನ ರಾಜಕೀಯ ವಿರೋಧಿಗಳು ನನ್ನನ್ನು ರಾಜಕೀಯವಾಗಿ ಎದುರಿಸುವ ಎದೆಗಾರಿಕೆ ತೋರಿಸಲಿ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಸವಾಲೊಡ್ಡಿದರು. ಅವರು, ಇಂದು ಕಾಪು – ರಾಜೀವ್ ಭವನ ದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಪಕ್ಷದ ಕೆಲವೊಂದು ಮುಖಂಡರು ಮತ್ತು ಕಾರ್ಯಕರ್ತರು ನಮ್ಮ ವಿರೋಧಿ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಇಟ್ಟುಕೊಂಡಿರುವ ಹೊಂದಾಣಿಕೆ ರಾಜಕೀಯಕ್ಕೆ ಬ್ರೇಕ್ ಹಾಕಬೇಕು. ಬಿ. ಜೆ.ಪಿ ಯ ಲೋಪದೋಷಗಳನ್ನು ಎತ್ತಿಹಿಡಿಯುವಲ್ಲಿ ಮತ್ತು ಜನವಿರೋಧಿ ನಿಲುವುಗಳನ್ನು, ತಾರತಮ್ಯ ಧೋರಣೆಯನ್ನು ವಿರೋಧಿಸುವಲ್ಲಿ ಯಾವುದೇ ರೀತಿಯ ಮೃದು ಧೋರಣೆ ತೋರಿಸಕೂಡದು ಎಂದು ತೀಕ್ಷ್ಣವಾಗಿ ಹೇಳಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ವಿಧಾನ ಪರಿಷತ್ ಸದಸ್ಯರು , ಕೆ. ಪಿ.ಸಿ.ಸಿ ಉಪಾಧ್ಯಕ್ಷರಾದ ಐವನ್ ಡಿಸೋಜ ರವರನ್ನು ಅಭಿನಂದಿಸಲಾಯಿತು. ನಂತರ ಮಾತನಾಡಿದ ಅವರು, ಪಕ್ಷದ ಕೆಲಸ ಕಾರ್ಯಗಳನ್ನು ನಿಷ್ಟೆಯಿಂದ ಮಾಡುವ ಸಕ್ರಿಯ ಪದಾಧಿಕಾರಿಗಳನ್ನ ಗುರುತಿಸಿ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕು, ಹೊಂದಾಣಿಕೆ ರಾಜಕೀಯ ಮಾಡದೆ ವಿಷಯಾಧಾರಿತ ರಾಜಕೀಯ ಮಾಡಿದಲ್ಲಿ ಪಕ್ಷಕ್ಕೆ ಒಳಿತಾಗುತ್ತದೆ. ಪಕ್ಷ ಸಂಘಟನೆಯ ಬಗ್ಗೆ ಮುಂದಿನ ದಿನಗಳಲ್ಲಿ ರೂಪುರೇಷೆ ರಚಿಸಿಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ನನ್ನ ಬೂತ್ ನನ್ನ ಜವಾಬ್ದಾರಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದರು. ಕಾಪು ವಿ. ಸ. ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡು ಪ್ರಥಮ ಬಾರಿಗೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಕೆ. ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಗಳಾದ ಇನಾಯತ್ ಅಲಿ ಮೂಲ್ಕಿಯವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ವಿನಯ್ ಕುಮಾರ್ ಸೊರಕೆಯವರ ಮುತುವರ್ಜಿಯಲ್ಲಿ ಕಾಪು ಕ್ಷೇತ್ರ ಬೇರೆ ಕ್ಷೇತ್ರಗಳಿಗಿಂತ ಸಂಘಟನಾತ್ಮಕವಾಗಿ ಉತ್ತಮವಾಗಿದೆ, ಪಕ್ಷವನ್ನು ಇನ್ನಷ್ಟು ಬಲಯುತಗೊಳಿಸಿ ಮುಂದಿನ ಚುನಾವಣೆಗಳಲ್ಲಿ ಸಕಾರಾತ್ಮಕ ಫಲಿತಾಂಶ ಬರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡೋಣ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಅಕ್ಟೊಬರ್ 21 ಕ್ಕೆ ನಡೆಯಲಿರುವ ವಿಧಾನ ಪರಿಷತ್ ಉಪ ಚುನಾವಣೆಯ ಬಗ್ಗೆ ಕಾರ್ಯಕರ್ತರು ಸಜ್ಜಾಗುವಂತೆ ಸೂಚಿಸಿದರು. ಸಭೆಯಲ್ಲಿ, ಪಕ್ಷದ ಪ್ರಮುಖ ರಾದ ಪ್ರಶಾಂತ್ ಜತ್ತನ್ನ, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ಅಝೀಜ್ ಹೆಜಮಾಡಿ, ಗಂಗಾಧರ ಸುವರ್ಣ, ರಮೀಜ್ ಹುಸೇನ್, ಗೋಪಾಲ ಪೂಜಾರಿ ಮತ್ತಿತರ ಪ್ರಮುಖರು, ಬ್ಲಾಕ್ ಸಮಿತಿ ಹಾಗೂ ಇತರೆ ಘಟಕ, ಸಮಿತಿಗಳ ಪದಾಧಿಕಾರಿಗಳು, ಪುರಸಭೆ, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಮತ್ತು ಜಿಲ್ಲಾ ಪಂಚಾಯತ್ ನ ಹಾಲಿ ಹಾಗೂ ಮಾಜಿ ಸದಸ್ಯರು, ವಿವಿಧ ಗ್ರಾಮೀಣ ಮತ್ತು ಬೂತ್ ಸಮಿತಿ ಅಧ್ಯಕ್ಷರುಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕೆ. ದಿವಾಕರ್ ಶೆಟ್ಟಿ ವಂದಿಸಿದರು. ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಸಿದರು.

Leave a Reply

Your email address will not be published. Required fields are marked *