×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಎಪ್ರಿಲ್ ಒಂದರಿಂದ ಟೋಲ್ ದರ ಹೆಚ್ಚಳ : ರಾಜ್ಯಾದ್ಯಂತ ಟೋಲ್ ಪ್ಲಾಜ಼ಾಗಳ ಮುಂದೆ ಪ್ರತಿಭಟನೆಗೆ ಹೋರಾಟ ಸಮಿತಿ ಮನವಿ

ಎಪ್ರಿಲ್ ಒಂದರಿಂದ ದೇಶಾದ್ಯಂತ ಟೋಲ್ ದರಗಳನ್ನು 5 ರಿಂದ 10% ವರಗೆ ಏರಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ಏಕಪಕ್ಷೀಯ, ಅನೈತಿಕ ನಿಲುವಾಗಿದ್ದು ವಾಹನ ಸವಾರರ ಮೇಲೆ ವಿಪರೀತ ಹೊರೆಬೀಳಲಿದೆ. ಪ್ರತಿ ವರ್ಷ ಟೋಲ್ ದರ ಹೆಚ್ಚಳ ಮಾಡುವ ಸರಕಾರದ ನೀತಿ ಬಲವಂತದ ಸುಲಿಗೆ ಅಲ್ಲದೆ ಮತ್ತೇನಲ್ಲ. ಕೇಂದ್ರ ಸರಕಾರದ ಈ ನಿರ್ದಯ ಸುಲಿಗೆ ನೀತಿಯನ್ನು ವಿರೋಧಿಸಿ ಎಪ್ರಿಲ್ ಒಂದರಂದು ರಾಜ್ಯಾದ್ಯಂತ ಟೋಲ್ ಗೇಟ್ ಗಳ ಮುಂಭಾಗ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸುವಂತೆ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ ಮನವಿ ಮಾಡಿದೆ. ಈಗಾಗಲೆ ಬೆಲೆಯೇರಿಕೆ, ನಿರುದ್ಯೋಗ, ಆದಾಯ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಕುಸಿತ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ವಿಪರೀತ ಹೆಚ್ಚಿದೆ. ಇದರಿಂದ ಸರಕು ಸಾಗಾಣಿಕೆ ದುಬಾರಿಯಾಗಿ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ರಸ್ತೆಗಳಲ್ಲಿ ವಾಹನಗಳ ಓಡಾಟದ ಹೆಚ್ಚಳದಿಂದ ಟೋಲ್ ಕಂಪೆನಿಗಳು ದೊಡ್ಡ ಮಟ್ಟದ ಲಾಭಗಳಿಸುತ್ತಿದೆ. ಅವರ ಹೂಡಿಕೆಯ ಬಂಡವಾಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಪಾಸು ಬರುತ್ತಿದೆ. ಫಾಸ್ಟ್ ಟ್ಯಾಗ್ ನಿಯಮದಿಂದ ಟೋಲ್ ಕಂಪೆನಿಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಹಾಗಿರುತ್ತಾ ವರ್ಷದಿಂದ ವರ್ಷಕ್ಕೆ ಟೋಲ್ ಸುಂಕದಲ್ಲಿ ಕಡಿತ ಆಗಬೇಕಿತ್ತು. ಅದರ ಬದಲಿಗೆ ಪ್ರತಿವರ್ಷ ಎಪ್ರಿಲ್ ನಲ್ಲಿ ಕಡ್ಡಾಯ ಎಂಬಂತೆ ಟೋಲ್ ದರವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಇದು ಅಕ್ರಮ ಮಾತ್ರ ಅಲ್ಲ, ಸಂಕಷ್ಟದಲ್ಲಿ ಇರುವ ಜನರಿಂದ ಅಧಿಕಾರದ ಬಲದ ಮೂಲಕ ಬಲವಂತವಾಗಿ ನಡೆಸುವ ಸುಲಿಗೆಯೂ ಹೌದು. ವರ್ಷದಿಂದ ವರ್ಷಕ್ಕೆ ಟೋಲ್ ಸುಂಕ ವಿಧಿಸುವ ರಸ್ತೆಗಳ ಸಂಖ್ಯೆ ಏರುತ್ತಿದೆ. ರಾಜ್ಯ ಹೆದ್ದಾರಿಗಳಿಗೂ ಟೋಲ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ವಾಹನ ಸವಾರರು ರಸ್ತೆಗೆ ಇಳಿಯಲು ಭಯ ಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಟೋಲ್ ದರದ ಹೆಚ್ಚಳವನ್ನು ಮೌನವಾಗಿ ಸಹಿಸಿದರೆ ಮುಂದಿನ ದಿ‌ನಗಳಲ್ಲಿ ರಸ್ತೆಗಳ ಬಳಕೆಯೇ ಜನಸಾಮಾನ್ಯರಿಗೆ ಅಸಾಧ್ಯ ಆಗಲಿದೆ. ಈ ಎಲ್ಲಾ ಕಾರಣಗಳಿಗೆ ಟೋಲ್ ದರ ಹೆಚ್ಚಳವನ್ನು ನಾಗರಿಕ ಸಮಾಜ ಬಲವಾಗಿ ವಿರೋಧಿಸಬೇಕಿದೆ. ಎಪ್ರಿಲ್ ಒಂದರಂದು ಟೋಲ್ ದರ ಹೆಚ್ಚಳದ ಸಂದರ್ಭದಲ್ಲಿಯೆ ಆಯಾಯ ಭಾಗದ ‌‌ನಾಗರಿಕ ಸಂಘಟನೆಗಳು ರಾಜ್ಯದ ಟೋಲ್ ಗೇಟ್ ಗಳ ಮುಂಭಾಗ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ನಡೆಸುವ ಮೂಲಕ ಸರಕಾರಗಳಿಗೆ ಪ್ರಬಲ ಎಚ್ಚರಿಕೆಯನ್ನು ರವಾನಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಜನತೆಯಲ್ಲಿ ಮನವಿ ಮಾಡಿದೆ.

Leave a Reply

Your email address will not be published. Required fields are marked *