
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಅ.15ರಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ನಝೀರ್ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ, ಭಾರತವು ಸರ್ವಧರ್ಮ ಸಮಾನತೆಯನ್ನು ಸಾರಿದ ದೇಶ. ಗಾಂಧೀಜಿಯ ನಿರಂತರ ಶಾಂತಿಯುತ ಹೋರಾಟದ ತತ್ತ್ವಗಳು ಹಾಗೂ ಅವರ ಅನುಯಾಯಿಗಳು ದೇಶದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆ ಮಹತ್ತರವಾದದ್ದು. ಇಂತಹ ಮಹನೀಯರನ್ನು ಪ್ರತಿಯೊಬ್ಬರು ನೆನೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಸ್ಕೌಟ್ಸ್-ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್ ಸಿಂಧಿಯಾ, ಅಬ್ದುಲ್ ನಝೀರ್ರವರ ಧರ್ಮಪತ್ನಿ ಸಮೀರಾ ನಝೀರ್, ಗುಜರಾತಿನ ರಾಷ್ಟ್ರ ವೇದಿಕ್ ಮಿಷನ್ ಟ್ರಸ್ಟಿ ಸ್ವಾಮಿ ಧರ್ಮಬಂಧುಜಿ, ಉದ್ಯಮಿ ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಆಳ್ವಾಸ್ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ ಉಪಸ್ಥಿತರಿದ್ದರು. ನೌಕಾದಳದ ಕೆಡೆಟ್ ಕ್ಯಾಪ್ಟನ್ ಶಾಶ್ವತ್ ರೈ ಅವರಿಂದ ಗೌರವ ರಕ್ಷೆ ಸ್ವೀಕರಿಸಲಾಯಿತು. ಪೆರೇಡ್ ಕಮಾಂಡರ್ ಆಗಿ ಕೆಡೆಟ್ ಪುಷ್ಯ, ಪೈಲೆಟ್ಸ್ಗಳಾಗಿ ಅಮೃತ ಭಟ್, ಅಯನಾ, ತೇಜಸ್ವಿನಿ, ದೀಕ್ಷಾ ನಿರ್ವಹಿಸಿದರು. ಆಳ್ವಾಸ್ನ ವಿವಿಧ ಶಿಕ್ಷಣ ಸಂಸ್ಥೆಗಳ ೨೫,೦೦ಒ೦ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಸೇನಾ ಅಧಿಕಾರಿಗಳು, ಪೋಷಕರು, ಸಾರ್ವಜನಿಕರು ಬೃಹತ್ ಆಚರಣೆಗೆ ಸಾಕ್ಷಿಯಾದರು. ಆಳ್ವಾಸ್ ಪ.ಪೂ ಕಾಲೇಜಿನ ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು.

