
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿದ್ದು, ಕೊಲೆಗೀಡಾದ ಯುವಕರ ತಾಯಂದಿರ ನೋವು ಒಂದೇ ಆಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸರಕಾರದ ಜನಪ್ರತಿನಿಧಿಗಳು ಕೇವಲ ಒಂದು ಕುಟುಂಬವನ್ನು ಭೇಟಿ ನೀಡಿ ಸಾಂತ್ವಾನ ಹೇಳಿ ಪರಿಹಾರ ನೀಡಿದ್ದು, ಸರಕಾರದ ತಾರತಮ್ಯ ನೀತಿ ಬಗ್ಗೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಮಾಡುವುದಾಗಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳು ಆತಂಕಕಾರಿಯಾಗಿದ್ದು, ರಾಜ್ಯ ಸರಕಾರಕ್ಕೆ ನಿಜವಾಗಿಯೂ ಕೋಮು ಸಂಘರ್ಷ ನಿಯಂತ್ರಣ ತರಬೇಕೆಂಬ ಇಚ್ಛೆಯಿದ್ದರೆ ಸುಗ್ರೀವಾಜ್ಞೆ ಮೂಲಕ ಕೋಮುಗಲಭೆ ನಿಯಂತ್ರಣ ಕಾಯಿದೆ ತರಲಿ ಎಂದು ಹೇಳಿದರು.

