ಅಂತರಾಷ್ಟ್ರೀಯ ಸಹಕಾರಿ ವರ್ಷ-2025 ಸಲುವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಆದೇಶದನ್ವಯ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದೊಂದಿಗೆ ಪಡುಬಿದ್ರಿ ಸಿ.ಎ.ಸೊಸೈಟಿ ನೇತೃತ್ವದಲ್ಲಿ, ಜೆಸಿಐ, ಪಡುಬಿದ್ರಿ ಹಾಲು ಉತ್ಪಾದಕರ ಸಹಕಾರಿ(ನಿ) ಹೆಜಮಾಡಿ ಸಹಯೋಗದೊಂದಿಗೆ ಇಂದು ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗ ಶಿವರಾಮ ಎನ್ ಶೆಟ್ಟಿ ಮಟ್ಟಿಮನೆ ಗದ್ದೆಯಲ್ಲಿ ಚಿಣ್ಣರ ನಡಿಗೆ ಕೃಷಿಯ ಕಡೆಗೆ ಎಂಬ ಧ್ಯೇಯದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ನಾಟಿಯ ಬಗ್ಗೆ ಪ್ರಾತ್ಯಕ್ಷಿತೆ ನಡೆಯಿತು. ಮುಲ್ಕಿ ಬಿಲ್ಲವರ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಭತ್ತದ ಗದ್ದೆಯಲ್ಲಿ ಮೂರು ತರಹದ ಕೃಷಿಯನ್ನು ಮಾಡುತ್ತಾ ಬರುತ್ತಿದ್ದು, ಮದ್ಮಾಲ್-ಸುಗ್ಗಿ, ಕೊಳ್ಕೆ-ಬಾಣಂತಿ, ಎನೆಲ್-ಬಜಾರಿ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಸಹಕಾರಿ ಪದ್ಧತಿಯನ್ನು ಹಿಂದಿನಿಂದಲೂ ಕೃಷಿ ಅವಲಂಬಿತರು ಅನುಸರಿಸುತ್ತಿದ್ದರು. ಕೃಷಿ ನಾಟಿಯ ಸಮಯದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಹೊಲದಲ್ಲಿ ಕೆಲಸ ಮಾಡುವಾಗ ಸಹಾಯ ಮಾಡುತ್ತಿದ್ದರು ಹಾಗೂ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದರು. ಇಂದಿನ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪಡುಬಿದ್ರಿ ಸಹಕಾರಿ ಸೊಸೈಟಿ ಮಾಡಿರುವುದು ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ದಯಾನಂದ ಹೆಜಮಾಡಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಾನು ಕೂಡ ಕೃಷಿ ಕುಟುಂಬದಲ್ಲಿ ಜನಿಸಿದವನು. ಮನೆಯ ಗದ್ದೆಯಲ್ಲಿ ನೇಜಿ ನೆಡುವ ದಿವಸ ನಮಗೆಲ್ಲ ಉತ್ಸವದ ದಿನ. ಪೈರನ್ನು ಕೊಯ್ದು ಮನೆಗೆ ಹೊತ್ತು ತರುವಾಗ ಆಗುವಂತಹ ಖುಷಿಯೇ ಬೇರೆ. ಕಂಪ್ಯೂಟರ್ ಯುಗದಲ್ಲಿ ನಮ್ಮ ಮಕ್ಕಳು ಕೂಡ ಕಲಿತು ಮುಂದೆ ಬರುತ್ತಿದ್ದಾರೆ ಅದು ಸಂತೋಷದ ವಿಷಯ. ಆದರೆ ನಮ್ಮ ಮಕ್ಕಳು ಕೂಡ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಕೃಷಿಯನ್ನು ಮುಂದುವರೆಸಿಕೊಂಡು ಹೋಗ ಬೇಕು ಎಂದರು. ಕಾರ್ಯಕ್ರಮದಲ್ಲಿ ಸೊಸೈಟಿ ನಿರ್ದೇಶಕ ಶಿವರಾಮ ಎನ್ ಶೆಟ್ಟಿಯವರು ತಮ್ಮ ಮಟ್ಟಿ ಮನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ ನಾಟಿಯ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು. ಕೃಷಿಯ ಕಡೆಗೆ ಎಂಬ ಅಭಿಯಾನ ದೊಂದಿಗೆ ನಮ್ಮ ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಅವರ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಹೆಜಮಾಡಿ ಪ್ರೌಢಶಾಲೆಯ ಸುಮಾರು ಎಪ್ಪತ್ತೈದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭ ಪಡುಬಿದ್ರಿ ಸಿ.ಎ. ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಉಪಾಧ್ಯಕ್ಷ ಗುರುರಾಜ್ ಪೂಜಾರಿ, ವಾಮನ ಕೋಟ್ಯಾನ್, ದಯಾನಂದ ಹೆಜಮಾಡಿ, ಜೆಸಿಐ ಪಡುಬಿದ್ರಿ ಅಧ್ಯಕ್ಷೆ ಶ್ರುತಿ, ಹಾಲು ಉತ್ಪಾದಕರ ಸಹಕಾರಿ ಸಂಘ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುಶಲ, ಹೆಜಮಾಡಿ ಪಂಚಾಯತ್ ಅಧ್ಯಕ್ಷೆ ರೇಷ್ಮ ಮೆಂಡನ್, ನಿರ್ದೇಶಕರಾದ ಗಿರೀಶ್ ಪಲಿಮಾರು, ಕೃಷ್ಣ ಬಂಗೇರ, ಮಾಧವ ಆಚಾರ್ಯ, ರೋಹಿಣಿ ಎ, ಕುಸುಮಾ ಕರ್ಕೇರ, ಶಿವರಾಮ ಎನ್ ಶೆಟ್ಟಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಎಚ್.ಪುತ್ರನ್ ಹಸನ್ ಬಾವಾ ಹಾಗೂ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು, ಹೆಜಮಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಡುಬಿದ್ರಿ ಸಿ.ಎ.ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಸ್ವಾಗತಿಸಿದರು. ರವಿರಾಜ್ ಕೋಟ್ಯಾನ್ ನಿರೂಪಿಸಿದರು. ಗುರುರಾಜ್ ಪೂಜಾರಿ ವಂದಿಸಿದರು.

