
ನಿನ್ನೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ಮೇಲೆ ತಲವಾರು ದಾಳಿ ನಡೆದಿದೆ ಎಂಬ ವಿಷಯದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂಬ ಸುದ್ದಿ ಪ್ರಕಟವಾಗುತ್ತಿರುವಾಗಲೆ ಕೆಲವು ಬಿಜೆಪಿಯ ನಾಯಕರು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಅಶಾಂತಿ ಹರಡುವ ದ್ವೇಷದ ಮಾತುಗಳನ್ನು ಸುದ್ದಿವಾಹಿನಿ ಮೂಲಕ ಪ್ರಕಟಗೊಳಿಸಿದ್ದು ಅವರಿಗೆ ತಮ್ಮದೇ ಸರಕಾರದ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಇಲ್ಲವೋ ಎಂಬ ಸಂಶಯ ಮೂಡುತ್ತದೆ. ಘಟನೆ ನಡೆದು ಅದರ ತನಿಖಾ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ಅವಸರದಿಂದ ಪತ್ರಿಕಾ ಪ್ರಕಟಣೆ ನೀಡುವುದು ಬಿಜೆಪಿಯ ಕೆಲವು ನಾಯಕರ ಹತಾಶ ಪ್ರಯತ್ನ ಹಾಗೂ ಇದೊಂದು ಪುಕ್ಕಟೆ ಪ್ರಚಾರ ಪಡೆಯುವ ತಂತ್ರ. ಆದರೂ ಕೂಡ ಮಂಗಳೂರಿನ ದಕ್ಷ ಪೊಲೀಸ್ ಅಧಿಕಾರಿಗಳು ಇಂತಹ ಗಂಭೀರ ಹಾಗೂ ಸೂಕ್ಷ್ಮ ವಿಷಯವನ್ನು ಕೈಗೆತ್ತಿಕೊಂಡು ಪ್ರಕರಣವನ್ನು ಭೇದಿಸಿ ಸತ್ಯಾಸತ್ಯತೆಯ ವರದಿಯನ್ನು ಘಟನೆ ನಡೆದ 24 ಗಂಟೆಗಳ ಒಳಗೆ ಸಾರ್ವಜನಿಕರ ಎದುರು ಇಟ್ಟಿದ್ದಾರೆ. ಇದರಿಂದ ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚಾಗಿದೆ ಹಾಗೂ ಪ್ರಕರಣವನ್ನು ಭೇದಿಸಿ ಸತ್ಯವನ್ನು ಹೊರಹಾಕಿದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸು ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

