ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ́ಎ ಶ್ರೇಣಿಯ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಪಲಿಮಾರು ಶಾಖೆಯ ನೂತನ ಕಟ್ಟಡ “ಸಹಕಾರ ಸಂಕೀರ್ಣ” ಮತ್ತು ನವೀಕೃತ ಹವಾನಿಯಂತ್ರಿತ ಶಾಖೆಯು ಸೆಪ್ಟಂಬರ್ 9 ಸೋಮವಾರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ವೈ .ಸುಧೀರ್ ಕುಮಾರ್ ಹೇಳಿದರು. ಅವರು ಗುರುವಾರ ಸಂಜೆ ಪಡುಬಿದ್ರಿ ಸೊಸೈಟಿಯ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ ಸಂಕೀರ್ಣ ಮತ್ತು ನವೀಕೃತ ಪಲಿಮಾರು ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ ಸುಧೀರ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್., ಸಹಾಯಕ ನಿಬಂಧಕಿ ಸುಕನ್ಯಾ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಪಲಿಮಾರು ಗ್ರಾ.ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿರುವರು. ಸನ್ಮಾನ: ಸಮಾರಂಭದಲ್ಲಿ ಎಮ್.ಎನ್ ರಾಜೇಂದ್ರ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ., ಭಾರತ ಕಬ್ಬಡಿ ತಂಡದ ಮಾಜಿ ನಾಯಕ ಶೇಖರ ಶೆಟ್ಟಿ, ಯುವ ಕೃಷಿಕ ರೋಹಿತ್ ಶೆಟ್ಟಿ, ಯುವ ಸಮಾಜ ಸೇವಕ ಶರಣ್ ಕುಮಾರ್ ಮಟ್ಟುರವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಮಜಾ ಟಾಕೀಸ್ ಖ್ಯಾತಿಯ ಚಂದ್ರಕಾಂತ್ ಪಡುಬಿದ್ರಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ನೂತನ ಶಾಖಾ ಕಟ್ಟಡವು ವಿಶಾಲವಾದ ನವೀಕೃತ ಹವಾನಿಯಂತ್ರಿತ ಶಾಖೆಯೊಂದಿಗೆ ವಿಶಾಲ ಭದ್ರತಾ ಕೊಠಡಿ ಗ್ರಾಹಕರಿಗೆ ಸೇಫ್ ಲಾಕರ್ ಸೌಲಭ್ಯ ಹೊಂದಿದೆ. ಶಾಖೆಯೊಂದಿಗೆ ಅಂಗಡಿ ಕೋಣೆಗಳನ್ನು ಹೊಂದಿದ್ದು, ಈ ಅಂಗಡಿ ಕೋಣೆಗಳಲ್ಲಿ ಕೃಷಿ ಉಪಕರಣ ಮಾರಾಟ ವಿಭಾಗ, ಇ-ಅಶ್ವ ಇಲೆಕ್ಟ್ರಿಕ್ ಸ್ಕೂಟರ್ ಮಾರಾಟ ವಿಭಾಗವನ್ನು ಆರಂಭಿಸಲಾಗುವುದು ಎಂದು ವೈ ಸುಧೀರ್ ಕುಮಾರ್ ತಿಳಿಸಿದರು. ಸೊಸೈಟಿಯು ಪ್ರಗತಿ ಪಥದಲ್ಲಿ ಸಾಗುತಿದ್ದು ರೂ.130 ಕೋಟಿ ಠೇವಣಾತಿ ಹೊಂದಿದ್ದು, ರೂ.88 ಕೋಟಿ ಸಾಲ ವಿತರಿಸಲಾಗಿದೆ. ಶೇ.96 ಸಾಲ ವಸೂಲಾತಿ ಮೂಲಕ ಉತ್ತಮ ಸಾಧನೆ ಗೈದಿದೆ. ಪ್ರಧಾನ ಕಚೇರಿಯೊಂದಿಗೆ ಹೆಜಮಾಡಿ ಶಾಖೆ ಹಾಗೂ ಪಲಿಮಾರು ಶಾಖೆಗೆ ಸ್ವಂತ ಕಟ್ಟಡವನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ. ಸೊಸೈಟಿಯ ಎಲ್ಲಾ 5 ಶಾಖೆಗಳು ಹವಾನಿಯಂತ್ರಿತ ಶಾಖೆಗಳಾಗಿವೆ. ಕಳೆದ 16 ವರ್ಷಗಳಲ್ಲಿ ಶೇ.25 ಡಿವಿಡೆಂಡ್ ನೀಡುತ್ತಾ ಬಂದಿದ್ದು, ರೈತರಿಗಾಗಿ ಶೇ.15 ರಿಯಾಯಿತಿ ನೀಡಲಾಗುತ್ತಿದೆ. ಸದಸ್ಯರಿಗಾಗಿಯೇ ಈ ಸ್ವಂತ ಕಟ್ಟಡವನ್ನು ನಿರ್ಮಿಸಿ ಆಧುನೀಕೃತ ಸೇವೆಯನ್ನು ನೀಡುತ್ತಿದ್ದು, ಸೊಸೈಟಿಯ ವ್ಯವಹಾರವನ್ನು ಅಭಿವೃದ್ದಿ ಗೊಳಿಸಿ ಸೊಸೈಟಿಯನ್ನು ಬೆಳೆಸುವ ಜವಬ್ದಾರಿಯು ಸದಸ್ಯರದ್ದೇ ಆಗಿರುವುದರಿಂದ ಸರ್ವರೂ ಸಹಕರಿಸಬೇಕಾಗಿ ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಸೊಸೈಟಿಯ ನಿರ್ದೇಶಕರುಗಳಾದ ವೈ.ಜಿ., ಗಿರೀಶ್ ಪಲಿಮಾರು, ರಸೂಲ್ ರಾಜಾರಾಮ ರಾವ್, ಮಾಧವ ಆಚಾರ್ಯ, ಸ್ಟ್ಯಾನ್ಲಿ ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನಾ, ಮುಖ್ಯ ಕಾರ್ಯನಿರ್ವಹಣಾಕಾರಿ ನಿಶ್ಮಿತಾ ಪಿ.ಎಚ್. ಉಪಸ್ಥಿತರಿದ್ದರು.


