×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

ಬೆಂಗಳೂರು : ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ‘ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪಡುವಲಪಾಯ ಮತ್ತು ಮೂಡಲಪಾಯ ಯಕ್ಷಗಾನ ಗಳನ್ನು ಸಮಾನವಾಗಿ ಪ್ರೋತ್ಸಾಹಿಸುತ್ತಿದೆ. ಬಯಲು ಸೀಮೆಯ ಯಕ್ಷಗಾನದ ಪ್ರಕಾರಗಳಾದ ಕೇಳಿಕೆ, ಘಟ್ಟದ ಕೋರೆ, ಮೂಡಲಪಾಯ ಮೊದಲಾದ ಪ್ರಕಾರಗಳ ಪ್ರಸರಣ, ಸಂರಕ್ಷಣೆಯ ಬಗ್ಗೆ ಕ್ರಿಯಾಶೀಲವಾದ ವಿಶೇಷ ಯೋಜನೆಗಳನ್ನು ಮ್ಮಿಕೊಳ್ಳಲಿದೆ’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ನುಡಿದರು. ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಜೂನ್ 24 ಹಾಗೂ 25, 2025 ರಂದು ಆಯೋಜಿಸಿದ ‘ಮೂಡಲಪಾಯ ಯಕ್ಷೋತ್ಸವ’ದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ‘ಕರಾವಳಿಯ ಯಕ್ಷಗಾನ ಕ್ಷೇತ್ರದಲ್ಲಿ ಈಗ ವಿದ್ಯಾವಂತರು ಸಕ್ರಿಯರಾಗಿದ್ದಾರೆ. ಯುವ ಜನರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅಂತಹ ಬೆಳವಣಿಗೆ ಮೂಡಲಪಾಯ ಯಕ್ಷಗಾನದಲ್ಲೂ ಆಗಬೇಕು. ಯುವಕರು, ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಬರಬೇಕು. ಮೂಡಲಪಾಯ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರು ಮತ್ತು ವಿದ್ವಾಂಸರು ಮೂಡಲಪಾಯ ಕ್ಷೇತ್ರಕ್ಕೆ ಯುವಜನತೆ ಬರುವಂತೆ ಉತ್ತೇಜಿಸಬೇಕು. ಕರಾವಳಿಯ ಕರ್ನಾಟಕದಲ್ಲಿ ಯಕ್ಷ ಶಿಕ್ಷಣದ ಪರಿಕಲ್ಪನೆ ತುಂಬಾ ಯಶಸ್ವಿಯಾಗಿದೆ. ಕರಾವಳಿ ಭಾಗದಲ್ಲಿ ಸುಮಾರು 10 ಸಾವಿರ ಮಂದಿ ವಿದ್ಯಾರ್ಥಿಗಳು ಯಕ್ಷಗಾನ ಕಲಿಯುತ್ತಿದ್ದಾರೆ. ಮೂಡಲಪಾಯ ಯಕ್ಷಗಾನದಲ್ಲಿಯೂ ಯಕ್ಷ ಶಿಕ್ಷಣದ ಯೋಜನೆಯನ್ನು ಆರಂಭಿಸಬೇಕು’ ಎಂದು ಡಾ. ತಲ್ಲೂರು ಹೇಳಿದರು. ಯಕ್ಷೋತ್ಸವವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ.ಕೆ. ಎಂ. ಗಾಯತ್ರಿ ಅವರು ಮಾತನಾಡಿ, ‘ಪಡುವಲಪಾಯ ಮತ್ತು ಮೂಡಲಪಾಯ ಪ್ರಕಾರಗಳು ಯಕ್ಷಗಾನ ಕಲೆಯ ಎರಡು ಕಣ್ಣುಗಳಿದ್ದಂತೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾದ ಈ ಕಲೆಗಳನ್ನು ಪ್ರೋತ್ಸಾಹಿಸುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಿಯಾಶೀಲವಾಗಿ ಶ್ರಮಿಸುತ್ತದೆ’ ಎಂದು ಹೇಳಿದರು. ವೇದಿಕೆಯ ಮೇಲೆ ಹಿರಿಯ ಮೂಡಲಪಾಯ ಕಲಾವಿದರು ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಕಲ್ಮನೆ ಎ. ಎಸ್. ನಂಜಪ್ಪ, ಮೂಡಲಪಾಯ ಯಕ್ಷಗಾನ ವಿದ್ವಾಂಸ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ, ಯಕ್ಷಗಾನ ಸಂಘಟಕರಾದ ಶ್ರೀನಿವಾಸ್ ಸಾಸ್ತಾನ ಉಪಸ್ಥಿತರಿದ್ದರು. ರಿಜಿಸ್ಟ್ರಾರ್ ನಮ್ರತ ಎನ್. ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಸಂಚಾಲಕರಾದ ಪುಟ್ಟಸ್ವಾಮಿ ಎ. ಆರ್., ಸದಸ್ಯರಾದ ಪ್ರಥ್ವಿರಾಜ ಕವತ್ತಾರು, ವಿದ್ಯಾಧರ ರಾವ್ ಜಲವಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *