
ಕಾಪು ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಅಂಗನವಾಡಿ ಕೇಂದ್ರದಲ್ಲಿ ಇವಿಎಂ ಮತಯಂತ್ರದ ಪ್ರಾತ್ಯಕ್ಷಿಕೆ ಸಂದರ್ಭ ಮತ ಯಂತ್ರದಲ್ಲಿ ದೋಷ ಕಂಡುಬಂದಿದ್ದು, ತಪ್ಪು ಮತ ನಮೂದಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾದ ಘಟನೆ ಇಂದು ನಡೆದಿದೆ. ಪ್ರಾಯೋಗಿಕ ಮತದಾನ ಪ್ರಾತ್ಯಕ್ಷಿಕೆಯ ಸಂದರ್ಭ ಮತದಾರರು ಪ್ರಾಯೋಗಿಕವಾಗಿ ತಮ್ಮ ಇಷ್ಟದ ಪಕ್ಷಕ್ಕೆ ಹಾಕಿದ ಮತವು, ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಿರುವುದು ಎಡವಟ್ಟಿಗೆ ಕಾರಣವಾಗಿತ್ತು. ಸಿಟ್ಟಿಗೆದ್ದ ಸ್ಥಳೀಯರು ಚುನಾವಣಾ ಸೆಕ್ಟರ್ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮತದಾನ ಪ್ರಕ್ರಿಯೆಯನ್ನು ಬಹಿಷ್ಕರಿಸಲು ಮುಂದಾಗಿದ್ದರು.ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತ, ಜಿಲ್ಲಾಡಳಿತ ಸಹಿತ ವಿವಿಧ ಇಲಾಖೆಗಳು ಚುನಾವಣಾ ಪೂರ್ವಭಾವಿ ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 92 ಹೇರೂರು ಅಂಗನವಾಡಿ ಕೇಂದ್ರದ ಚುನಾವಣಾ ಬೂತ್ ನಂಬ್ರ 121 ರಲ್ಲಿ ಇವಿಎಂ ಮತದಾನ ಯಂತ್ರ ಪ್ರದರ್ಶನ ಮತ್ತು ಮತದಾನ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.ತಾಲೂಕು ಆಡಳಿತದ ಮೂಲಕ ಸರಕಾರ ನಡೆಸಿರುವ ಪ್ರಾಯೋಗಿಕ ಪ್ರಾತ್ಯಕ್ಷಿಕೆಯ ವೇಳೆಯೇ ಹೀಗಾಗಿರುವುದು ಜನರಿಗೆ ತಪ್ಪು ಸಂದೇಶ ನೀಡಿದಂತಾಗಿದೆ. ತರಬೇತಿ ಅವಧಿಯಲ್ಲೇ ಹೀಗೆ ಆಗಿರುವುದು ಇವಿಎಂ ಮತಯಂತ್ರದ ಮೂಲಕ ನಡೆಯುವ ಮತದಾನದ ಬಗ್ಗೆ ಜನರಿಗೆ ಸಂದೇಹ ಬರುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಚುನಾವಣಾ ಆಯೋಗ ವಿಶೇಷ ಮುತುವರ್ಜಿ ವಹಿಸುವ ಅಗತ್ಯತೆಯಿದೆ ಎಂದು ಪಂ. ಸದಸ್ಯ ವಿಜಯ್ ಧೀರಜ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಲೇ ಇವಿಎಂ ಮತ ಯಂತ್ರದೊಂದಿಗೆ ಬಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ವಾಪಾಸ್ ಕರೆಯಿಸಿಕೊಂಡಿರುವ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅವರು, ಮತಯಂತ್ರವನ್ನು ಪರಿಶೀಲಿಸಲು ಸೂಚಿಸಿದರು ಬಳಿಕ ತಹಶೀಲ್ದಾರ್ ಉಪಸ್ಥಿತಿಯಲ್ಲೇ ಮತದಾನದ ಮರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.ತಹಶೀಲ್ದಾರ್ ಅವರ ಮನವೊಲಿಕೆಯ ಬಳಿಕ ಸ್ಥಳೀಯರು ಪ್ರಾಯೋಗಿಕ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಇವಿಎಂ ಮತಯಂತ್ರದಲ್ಲಿ ಸಿಬ್ಬಂದಿಗಳು ಬ್ಯಾಲೆಟ್ ಪೇಪರ್ ಜೋಡಿಸುವ ವೇಳೆ ಆಗಿರುವ ಪ್ರಮಾದದಿಂದಾಗಿ ಹೀಗಾಗಿದೆ. ಈ ಬಗ್ಗೆ ಸ್ಥಳೀಯರು ಗಮನಕ್ಕೆ ತಂದ ಕೂಡಲೇ ಪ್ರಾಯೋಗಿಕ ಮತಯಂತ್ರವನ್ನು ಪರಿಶೀಲಿಸಿ, ಹಿಂಪಡೆಯಲಾಗಿದೆ. ಮಧ್ಯಾಹ್ನದ ನಂತರ ಮತಯಂತ್ರವನ್ನು ಸರಿಪಡಿಸಿ, ಮರು ಮತದಾನ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಮುಂದೆ ಹೀಗಾಗದಂತೆ ಸೂಕ್ತ ಎಚ್ಚರಿಕೆ ವಹಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲಾಗಿದೆ ಎಂದರು

