
ಬಾಡಿಗೆ ಮನೆಯಲ್ಲಿ ವ್ಯಕ್ತಿ ನೇಣಿಗೆ ಶರಣು ಕಾಪು ತಾಲೂಕಿನ ಪಡುಬಿದ್ರಿಯ ಬಾಲಗಣಪತಿ ರಸ್ತೆಯ ಖುಷಿ ಟವರ್ಸ್ ಎಂಬ ಖಾಸಗಿ ಕಟ್ಟಡದ ಕೋಣೆಯಲ್ಲಿ ಬಾಡಿಗೆಗೆ ಒಂಟಿಯಾಗಿ ವಾಸವಿದ್ದ ವ್ಯಕ್ತಿಯೊಬ್ಬರು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪಡುಬಿದ್ರಿಯ ಹೋಟೆಲೊಂದರಲ್ಲಿ ಕೆಲಸಕ್ಕಿದ್ದ49 ವರ್ಷದ ಗುಣಶೀಲ ಎಂದು ಗುರುತಿಸಲಾಗಿದೆ. ಕಾಪು ಕರಂದಾಡಿ ನಿವಾಸಿಯಾಗಿದ್ದ ಗುಣಶೀಲರವರು ಅವಿವಾಹಿತರಾಗಿದ್ದು, ಕಳೆದ ಕೆಲ ವರ್ಷಗಳಿಂದ ಈ ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದರು. ಕಳೆದ ಸುಮಾರು ಐದು ದಿನಗಳಿಂದ ಕೋಣೆಯ ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಇದ್ದು, ಒಳ ಭಾಗದಿಂದದುರ್ನಾತ ಬರುತ್ತಿದ್ದರಿಂದ ಕಟ್ಟಡ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿ ಬಾಗಿಲು ತೆರೆದಾಗ ಮೃತದೇಹ ಫ್ಯಾನಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃತದೇಹವು ಬಹುತೇಕ ಕೊಳೆತ ಸ್ಥಿತಿಯಲ್ಲಿತ್ತು. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

