×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ, ಡಿ.23: ಪ.ಜಾತಿ/ಪಂಗಡದ ಮೀಸಲು ಹಣ ಸಚಿವರಿಂದ ದುರುಪಯೋಗ ಸುಂದರ್ ಮಾಸ್ತರ್ ಖಂಡನೆ

ಉಡುಪಿ: ಸರಕಾರವು ಪರಿಶಿಷ್ಟ ಜಾತಿ/ ಪಂಗಡದವರ ಸಬಲೀಕರಣಕ್ಕಾಗಿ ಮೀಸಲಿರಿಸಿದ  ಅನುದಾನವನ್ನು ಚುನಾವಣೆಗೆ 3 ತಿಂಗಳು ಬಾಕಿ ಇರುವಾಗ ತರಾತುರಿಯಲ್ಲಿ ಪರಿಶಿಷ್ಟ ಜಾತಿಯವರಿಲ್ಲದ ಪ್ರದೇಶಗಳಿಗೆ ರಸ್ತೆ, ಚರಂಡಿ, ಸಮುದಾಯ ಭವನ ಹಾಗೂ ಖಾಸಗಿ ಒಡೆತನದ ದೈವದ ಗುಡಿಗಳಿಗೆ ಬಿಡುಗಡೆಗೊಳಿಸಿ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಒತ್ತಡ ಹೇರಿ ಶಿಫಾರಸು ಮಾಡುವ ಬಗ್ಗೆ ಬೆದರಿಕೆಯೊಡ್ಡಿ ಅನುದಾನಗಳನ್ನು ದುರ್ಬಳಕೆ ಮಾಡುತ್ತಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೇಲೆ ಸೂಕ್ತ ಪ್ರಕರಣ ದಾಖಲಿಸಿ ಸಂಪುಟದಿಂದ ವಜಾಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ. ರಾಜ್ಯ ಸರಕಾರದಲ್ಲಿ ದಲಿತರ ಮೀಸಲು ಹಣ ಕೇವಲ ಶೇ.14ರಷ್ಟು ಮಾತ್ರ ಬಳಕೆಯಾಗಿರುವ ಬಗ್ಗೆ ವರದಿಯಾಗಿದ್ದು, ದಲಿತರ ಸಬಲೀಕರಣದ ಮೀಸಲು ಹಣ ಬಳಕೆ ಮಾಡುವಲ್ಲಿ ವಿಫಲರಾಗಿರುವ ಸಚಿವರು, ಇದೀಗ ಅಡ್ಡದಾರಿ ಹಿಡಿದು ಪರಿಶಿಷ್ಟ ಜಾತಿ/ಪಂಗಡದವರು ಇಲ್ಲದ ಪ್ರದೇಶಗಳಿಗೆ ಕಾಲನಿ ಸಂಪರ್ಕ ರಸ್ತೆ ಎಂದು ಕೋಟ್ಯಾಂತರ ರೂ. ಅನುದಾನ ದುರ್ಬಳಕೆ ಮಾಡುತಿದ್ದಾರೆ. ಕಾಲನಿ ಸಂಪರ್ಕ ರಸ್ತೆ ಎಂದರೆ ರಥಬೀದಿಗೂ ಸಂಪರ್ಕ ರಸ್ತೆಯಾಗುವುದರಿಂದ ಸದ್ರಿ ಹಣವನ್ನು ಬಳಸಲು ಸಾಧ್ಯವೇ ಹಾಗೂ ಖಾಸಗಿ ದೈವಸ್ಥಾನಗಳಿಗೆ, ಸಾರ್ವಜನಿಕ ಸಮುದಾಯ ಭವನಗಳಿಗೆ ಅನುದಾನ ಬಳಸುವುದು ಸರಿಯೇ ಎಂದು ಸಚಿವರು ಉತ್ತರಿಸಬೇಕು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾದ ಕೂಡಲೇ ದಲಿತರ ವಸತಿ ಯೋಜನೆಗಳಿಗೆ 5ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ ಸಚಿವರು ವಚನಭ್ರಷ್ಟರಾಗಿದ್ದಾರೆ. ರೂ.1.50 ಲಕ್ಷದಲ್ಲಿ ವಸತಿ ನಿರ್ಮಾಣ ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ಎಲ್ಲಾ ಇಲಾಖೆಗಳಿಗೂ ಎಸ್‌ಇಪಿ/ಟಿಎಸ್ಎಪಿ ಅನುದಾನ ಬಿಡುಗಡೆ ಯಾಗಿದ್ದರೂ ಹೆಚ್ಚಿನ ಇಲಾಖೆಯವರು ದಲಿತರ ಹೆಸರಿನಲ್ಲಿ ದುರುಪಯೋಗ ಮಾಡಿದ್ದಾರೆ ಎಂದು ದೂರಿದ್ದಾರೆ. ದಲಿತರಿಲ್ಲದ ಪ್ರದೇಶಗಳಿಗೆ ಕಾಲನಿ ಸಂಪರ್ಕ ರಸ್ತೆ ಎಂದು ಮಾಡಲು ಸಮಜ ಕಲ್ಯಾಣ ಅಧಿಕಾರಿಗಳು ಶಿಫಾರಸು ಮಾಡಿದಲ್ಲಿ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯದಡಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಸಿದ ಸುಂದರ್ ಮಾಸ್ತರ್, ಆದ್ದರಿಂದ ಅಧಿಕಾರಿಗಳು ಅನುದಾನ ಬಳಕೆಗೆ ಸತ್ಯಾಂಶ ಇರುವ ವರದಿಯನ್ನು ನೀಡಬೇಕು. ಖಾಸಗಿ ಒಡೆತನದ ದೈವಸ್ಥಾನಗಳಿಗೆ ಅನುದಾನ ನೀಡಬಾರದು.ದಲಿತರ ವಸತಿ ಯೋಜನೆಗಳಿಗೆ 5.00 ಲಕ್ಷ ರೂ. ಹಾಗೂ ವಿದ್ಯಾವಂತ ಯುವಕ/ಯುವತಿಯರಿಗೆ ನಿರುದ್ಯೋಗ ಭತ್ಯೆ ಅಥವಾ ಸ್ವಉದ್ಯೋಗ ಯೋಜನೆಗೆ ಬಡ್ಡಿರಹಿತ ಅನುದಾನ ನೀಡಬೇಕು. ದಲಿತರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ಬಳಸುವಂತೆ ರಾಜ್ಯ ಸರಕಾರ ಕ್ರಮ ಕೈಗೊಳ್ಳುವಂತೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *