×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಟೋಲ್ ತೆರವು ನವಂಬರ್ ಅಂತ್ಯಕ್ಕೆ ಎಂಬ ಸಚಿವ ಸುನಿಲ್ ಕುಮಾರ್ ಹೇಳಿಕೆ ವಂಚನೆಯ ಹೊಸ ವರಸೆ : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ

ಸಂಸದ ನಳಿನ್ ಕುಮಾರ್ 20 ದಿನಗಳ ಕಾಲಾವಧಿ ನೀಡುವಂತೆ ಜನತೆಯ ಮುಂದೆ ಕೈ ಮುಗಿದಿದ್ದರೆ, ವಾರದ ತರುವಾಯ ಈಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಟೋಲ್ ತೆರವು ನವಂಬರ್ ಅಂತ್ಯಕ್ಕೆ ಎಂಬ ಹೊಸ ಹೇಳಿಕೆಯ ಮೂಲಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆಗೆ ಮತ್ತೊಂದು ಆಘಾತ ನೀಡಿದ್ದಾರೆ. ಈವರಗೆ ಟೋಲ್ ಸುಲಿಗೆಯ ಕುರಿತು ಒಂದು ಶಬ್ದವನ್ನೂ ಮಾತಾಡದಿರುವ ಸುನಿಲ್ ಕುಮಾರ್ ಈಗ 40 ದಿನಗಳ ಕಾಲಾವಧಿಯ ಹೇಳಿಕೆಯೊಂದಿಗೆ ರಂಗಪ್ರವೇಶಿಸಿರುವುದು ಬಿಜೆಪಿ ಸರಕಾರದ ವಂಚನೆಯ ಹೊಸ ವರಸೆಯಲ್ಲದೆ ಮತ್ತೇನಲ್ಲ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬಣ್ಣಿಸಿದೆ. ಈ ರೀತಿಯ ಕಾಲಮಿತಿಗಳು ಆರು ವರ್ಷಗಳಿಂದ ಹಲವು ಬಾರಿ ಪುನರಾವರ್ತನೆಗೊಂಡಿದೆ. ತುಳುನಾಡಿನ ಜನತೆ ಇಂತಹ ಹೇಳಿಕೆಗಳ ಕುರಿತು ಯಾವುದೆ ನಂಬಿಕೆ ಹೊಂದಿಲ್ಲ. ಅಕ್ಟೋಬರ್ 17 ರಂದು 20 ದಿನಗಳ ಕಾಲಾವಧಿ ಕೊಡುವಂತೆ ಸಂಸದ ನಳಿನ್ ಕುಮಾರ್ ಕೈ ಮುಗಿದು ಬೇಡಿಕೊಂಡಾಗ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಎಲ್ಲಿದ್ದರು ? ಟೋಲ್ ಗೇಟ್ ಮುತ್ತಿಗೆ ಸಂದರ್ಭ ಇಡೀ ತುಳುನಾಡು ಒಂದಾಗಿ ಟೋಲ್ ಗೇಟ್ ಮುಚ್ಚಲು ಆಗ್ರಹಿಸುತ್ತಿದ್ದಾಗ ಉಸ್ತುವಾರಿ ಸಚಿವರ ಜವಾಬ್ದಾರಿ ಮರೆತು ಕಾಣೆಯಾಗಿದ್ದ ಸುನಿಲ್ ಕುಮಾರ್ ಈಗ ದಿನ ಮುಂದೂಡುವ ಹೊಸ ಆಟದೊಂದಿಗೆ ರಂಗಕ್ಕಿಳಿದಿರುವುದರ ಮರ್ಮ ಸಣ್ಣ ಮಕ್ಕಳಿಗೂ ಅರ್ಥವಾಗುತ್ತದೆ. ಬಿಜೆಪಿ ಸಂಸದ, ಶಾಸಕರುಗಳ ಇಂತಹ ಹಳಸಲು ಸುಳ್ಳುಗಳನ್ನು ನಂಬುವವರು ಈ ಜಿಲ್ಲೆಗಳಲ್ಲಿ ಈಗ ಯಾರೂ ಇಲ್ಲ ಎಂದು ಹೋರಾಟ ಸಮಿತಿ ತಿರುಗೇಟು ನೀಡಿದೆ‌. ಹೋರಾಟವನ್ನು ಕೈ ಬಿಟ್ಟರೆ ಟೋಲ್ ತೆರವು ಪ್ರಸ್ಥಾಪವನ್ನೆ ಬಿಜೆಪಿ ಸರಕಾರ ಕೈ ಬಿಡುತ್ತದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸಬಲ್ಲದು. ಬಿಜೆಪಿ ಸಂಸದ, ಶಾಸಕರ‌ನ್ನು ನಂಬಿದರೆ ಟೋಲ್ ಸುಲಿಗೆ ಶಾಶ್ವತವಾಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಮಾತುಕೊಟ್ಟಂತೆ ಕಾಲಮಿತಿಯಲ್ಲಿ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಅಕ್ಟೋಬರ್ 28 ರಿಂದ ನಡೆಯಲಿರುವ ಹಗಲು ರಾತ್ರಿ ಸಾಮೂಹಿಕ ಧರಣಿಯನ್ನು ಜನತೆ ವ್ಯಾಪಕವಾಗಿ ಬೆಂಬಲಿಸುವ ಮೂಲಕ ಟೋಲ್ ಗೇಟ್ ತೆರವು ಹೋರಾಟಕ್ಕೆ ಬಲ ತುಂಬಬೇಕು ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಮುನೀರ್ ಕಾಟಿಪಳ್ಳ
ಸಂಚಾಲಕರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

Leave a Reply

Your email address will not be published. Required fields are marked *