×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉಡುಪಿ: ಪ್ರಧಾನಿ ಮೋದಿ ಸಂಚರಿಸಲಿರುವ ರಸ್ತೆಗೆ ದೊರಕಿದ ದುರಸ್ತಿ ಭಾಗ್ಯ ಇತರೆ ರಸ್ತೆಗಳಿಗೂ ದೊರಕಲಿ: ಎಸ್ ಡಿ ಪಿ ಐ

ನವಂಬರ್ 28ರಂದು ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಇದರ ಭಾಗವಾಗಿ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ 169 ಎ ಕರಾವಳಿ ಬೈಪಾಸ್ ನಿಂದ ಹಿಡಿದು ಮಲ್ಪೆಗೆ ಹೋಗುವ ರಸ್ತೆಯ ಎರಡೂ ಕಡೆ ಏಕಕಾಲದಲ್ಲಿ ಕಾಂಕ್ರೀಟೀಕರಣ ಮಾಡುವ ಸಲುವಾಗಿ ರಸ್ತೆಯನ್ನು ಮುಚ್ಚಲಾಗಿದೆ. ಈ ಕಾಮಗಾರಿಯಿಂದ ದಿನ ನಿತ್ಯ ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗವಾಗಿ ಮಲ್ಪೆ ಮೀನುಗಾರಿಕಾ ಬಂದರಿಗೆ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಮಲ್ಪೆ ಬೀಚಿಗೆ ಭೇಟಿ ನೀಡುವ ಪ್ರವಾಸಿಗರು ಬಹಳಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಅದಲ್ಲದೆ ಎಪಿಎಂಸಿ ತರಕಾರಿ ಮಾರುಕಟ್ಟೆ, ಕೋಳಿ ಹಾಗೂ ಮಟನ್ ಮಾರುಕಟ್ಟೆ ಮತ್ತು ಆದಿ ಉಡುಪಿ ಶಾಲೆಗೆ ಹೋಗಬೇಕಾದ. ವಿದ್ಯಾರ್ಥಿಗಳು ಈ ಅವ್ಯವಸ್ಥೆಯಿಂದಾಗಿ ಪರದಾಡುವಂತಾಗಿದೆ. ದಿನಂಪ್ರತಿ ಹಲವು ವಾಹನಗಳು ಆ ಮಾರ್ಗವಾಗಿ ಸಂಚರಿಸುತ್ತವೆ.

ಈ ಹೆದ್ದಾರಿಯ ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದು ಇಲ್ಲಿ ಹಲವು ಅಪಘಾತಗಳು ಸಂಭವಿಸಿ ಬಹಳಷ್ಟು ಜನರು ಗಾಯಗೊಂಡಿದ್ದಾರೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣ ಗೊಳಿಸಬೇಕೆಂದು ಸಾರ್ವಜನಿಕರು ಬೇಡಿಕೆ ಇಡುತ್ತಾ ಬಂದಿದ್ದರೂ ಇದಾವುದನ್ನು ಲೆಕ್ಕಿಸದೆ ಇದೀಗ ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಒಮ್ಮಿಂದೊಮ್ಮೆಗೆ ಪ್ರಧಾನಿಯವರು ಸಂಚರಿಸುವ ರಸ್ತೆಯ ದುರಸ್ತಿ ಕಾಮಗಾರಿ ನಡೆಸುತ್ತಿರುವ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲವೇ? ಕೇವಲ ನಾಯಕರುಗಳನ್ನು ಮೆಚ್ಚಿಸಲು ಮಾತ್ರ ಇವರು ಕೆಲಸಗಳನ್ನು ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಅಲ್ಲದೆ ಪ್ರಧಾನಿಯವರು ಬಂದಿಳಿಯುವ ಆದಿ ಉಡುಪಿ ಹೆಲಿಫ್ಯಾಡ್ ಬಳಿ ಇರುವ ಗೂಡಂಗಡಿಗಳನ್ನು ಭದ್ರತೆಯ ಹೆಸರಿನಲ್ಲಿ ತೆರವುಗೊಳಿಸಲಾಗಿದೆ. ದುಡಿದು ಜೀವನ ಸಾಗಿಸುತ್ತಿರುವ ಆ ಸಣ್ಣ ಅಂಗಡಿಯವರಿಗೆ ಇದರಿಂದಾಗಿ ದಿಕ್ಕು ತೋಚದಂತಾಗಿದೆ.

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ಮಳೆ ಸುರಿದಿದ್ದು ನಗರ ಹಾಗೂ ಹಲವು ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟಿದೆ. ಜನಪ್ರತಿನಿಧಿಗಳು ಇದರ ಬಗ್ಗೆಯೂ ಗಮನಹರಿಸಬೇಕು ಹಾಗೂ ಆ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು ಅಲ್ಲದೆ ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಮುಗಿಸುವ ಮೂಲಕ ಪ್ರಧಾನಿಯವರು ಸಂಚರಿಸುವ ರಸ್ತೆಗಳಿಗೆ ದೊರಕಿದ ದುರಸ್ತಿ ಭಾಗ್ಯದಂತೆ ಇತರ ರಸ್ತೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಜನಸಾಮಾನ್ಯರ ಹಿತವನ್ನು ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಶ್ರಫ್ ಭಾವ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *