×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಜೃಂಭಣೆಯಿಂದ ಜರುಗಿದ 2 ದಿನಗಳ ‘ರೈತರ ಹಬ್ಬ’ ಉದ್ಘಾಟನೆ

​ಬ್ರಹ್ಮಾವರ: ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ರೈತರ ಹಬ್ಬ’ ಹಾಗೂ ಕೃಷಿ ಮೇಳವನ್ನು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು.
​ ಸಂಸದ ಕೋಟ ಶ್ರೀನಿವಾಸ ಪೂಜಾರಿ
​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದರು, “ಭಾರತವೆಂದರೆ ಅನೇಕ ಬೆಳೆಗಳ, ತಳಿಗಳ ಆಗರ. ವಿವಿಧತೆಯಲ್ಲಿ ಸಮಗ್ರತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಮಾದರಿ ಸಮೃದ್ಧ ದೇಶ ನಮ್ಮದು. ವಿಶ್ವದ ವಿವಿಧ ಹಣ್ಣುಗಳು ಹಾಗೂ ಕಾಶ್ಮೀರದ ಕೇಸರಿಯಂತಹ ಬೆಳೆಗಳನ್ನು ನಮ್ಮ ಈ ಭಾಗಕ್ಕೆ ತಂದು, ತಂತ್ರಜ್ಞಾನ ಮತ್ತು ಮಾರ್ಗದರ್ಶನ ಪಡೆದು ಸಾಧನೆ ಮಾಡುತ್ತಿರುವ ಯುವ ಕೃಷಿಕರು ನಮ್ಮ ಹೆಮ್ಮೆ,” ಎಂದು ಪ್ರಶಂಸಿಸಿದರು.
​ಮುಂದುವರಿದು ಮಾತನಾಡುತ್ತಾ, “ಗ್ರಾಮ ಪಂಚಾಯಿತಿಯಿಂದ ಹಿಡಿದು ದೆಹಲಿಯ ಸಂಸತ್ ಭವನದವರೆಗೆ ಸಾಗಿಬಂದಿರುವುದರಿಂದ ಗ್ರಾಮೀಣ ರೈತರ ಸಮಸ್ಯೆಗಳು ನನಗೆ ಚೆನ್ನಾಗಿ ತಿಳಿದಿವೆ. ಪ್ರತಿಯೊಬ್ಬ ರೈತನ ಅಗತ್ಯಗಳ ಹಿಂದೆ ಕೆಲಸ ಮಾಡುವ ಮನಸ್ಸು ನನ್ನಲ್ಲಿದೆ. ಆಧುನಿಕ ತಂತ್ರಜ್ಞಾನ, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮತ್ತು ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆಹಾರ, ಆರೋಗ್ಯ, ಆರ್ಥಿಕತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ,” ಎಂದರು.
​ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ನುಡಿದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಗೌರವಾನ್ವಿತ ಕುಲಪತಿಗಳಾದ ಡಾ. ಎಮ್. ವಿ. ಧನಂಜಯ ಅವರು ಮಾತನಾಡಿ,
​”ದೇವರ ಪೂಜೆಗೆ ಸಲ್ಲುವ ಪ್ರಸಾದದಿಂದ ಹಿಡಿದು ಪವಿತ್ರ ಅಭಿಷೇಕಕ್ಕೆ ಬಳಸುವ ಹಾಲಿನವರೆಗೆ, ಗಡಿಯಲ್ಲಿ ದೇಶ ಕಾಯುವ ಸೈನಿಕನ ಬಟ್ಟಲಿನಲ್ಲಿರುವ ಶಕ್ತಿಯುತ ಆಹಾರದಿಂದ ಜಗತ್ತಿನ ಸಮಸ್ತ ಜೀವರಾಶಿಯ ಹೊಟ್ಟೆ ತುಂಬಿಸುವ ಅನ್ನದವರೆಗೆ — ಈ ಎಲ್ಲದರ ಹಿಂದಿರುವುದು ರೈತ. ಆತನ ನಿಸ್ವಾರ್ಥ ಬೆವರ ಹನಿಯೇ ಈ ಜಗತ್ತಿನ ಜೀವನಾಡಿ.”
​ ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಆಧುನಿಕ ಅವಕಾಶಗಳನ್ನು ತಲುಪಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ “ರೈತನ ಹೊಲದಲ್ಲಿ ಹೊಸ ತಂತ್ರಜ್ಞಾನ ಬೆಳಗಿದರೆ ಮಾತ್ರ ದೇಶದ ಆಹಾರ, ಆರೋಗ್ಯ, ಆರ್ಥಿಕತೆ ಮತ್ತು ಭದ್ರತೆ ಸಾಧ್ಯ. ಈ ಕೃಷಿ ಮೇಳವು ರೈತ ಹಾಗೂ ಸರ್ಕಾರದ ಯೋಜನೆಗಳ ನಡುವಿನ ಸಂಪರ್ಕ ಸೇತುವೆಯಾಗಿದೆ,” ಎಂದು ತಿಳಿಸಿದರು.

​ರಾಜ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಂ. ಎ. ಗಫೂರ್ ಅವರು ಸರ್ಕಾರದ ಪರವಾಗಿ ಶುಭ ಸಂದೇಶ ನೀಡಿ, ರೈತರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರವು ಸದಾ ಬದ್ಧವಾಗಿದೆ ಎಂದು ತಿಳಿಸಿದರು.
​ವೇದಿಕೆಯಲ್ಲಿ ರಾಜಕೀಯ ಗಣ್ಯರು, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದು ಸನ್ಮಾನಿತರಾದ ಸಾಧಕರು, ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಬ್ರಹ್ಮಾವರ ಕೃಷಿ ಮೇಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೃಷಿಕರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
​ಬೆವರ ಹನಿಗಳಲ್ಲಿ ಸಮೃದ್ಧಿಯ ಕನಸು ಕಾಣುವ ರೈತನಿಗೆ ಈ ಕೃಷಿ ಮೇಳವು ನಿಜವಾದ ಜ್ಞಾನದ ಹಬ್ಬ ಹಾಗೂ ಅಭಿವೃದ್ಧಿಯ ಹೊಸ ಅವಕಾಶವಾಗಿದೆ.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರಾದ ಎಚ್.ಡಿ. ದೇವಿಕುಮಾರ್, ಎಚ್.ಎಸ್. ಶಶಾಂಕ್, ಟಿ. ಬಸವರಾಜ ನಾಯ್ಕ್, ಡಾ. ಶಾಮರಾವ್ ಜಹಾಗೀರದಾರ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ., ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕಿ ಡಾ. ಬಿ. ಹೇಮ್ಲಾ ನಾಯಕ್, ಸಂಶೋಧನಾ ನಿರ್ದೇಶಕ ಡಾ. ಶ್ರೀಧರ ಎಸ್., ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೆಸ್ತಾ ಸೇರಿದಂತೆ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಡಲ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ನವೀನ್ ಎನ್.ಈ. ವಂದಿಸಿದರು.

Leave a Reply

Your email address will not be published. Required fields are marked *