×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಕಾಪುವಿನಲ್ಲಿ ಅ. 18ರಂದು ‘ಪಿಲಿಪರ್ಬ ಸೀಸನ್-4’ ಸಂಭ್ರಮ: ₹2 ಲಕ್ಷ ಪ್ರಥಮ ಬಹುಮಾನಕ್ಕಾಗಿ 11 ಹುಲಿವೇಷ ತಂಡಗಳ ಹೈವೋಲ್ಟೇಜ್ ಪೈಪೋಟಿ

ಕಾಪು: ಕರಾವಳಿಯ ಜನಪದ ಕಲೆಯಾದ ಹುಲಿವೇಷದ ವೈಭವವನ್ನು ಅನಾವರಣಗೊಳಿಸುವ ನಾಲ್ಕನೇ ವರ್ಷದ ಕಾಪು ಪಿಲಿಪರ್ಬ ಸೀಸನ್–4 ಸ್ಪರ್ಧೆಯು ಅಕ್ಟೋಬರ್ 18ರಂದು ಸಂಜೆ 3.30ಕ್ಕೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಕಾಪು ರಕ್ಷಣಾಪುರ ಜವನೆರ್ ನೇತೃತ್ವದಲ್ಲಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗುತ್ತಿರುವ ಈ ಸ್ಪರ್ಧೆಯಲ್ಲಿ 11 ಪ್ರತಿಷ್ಠಿತ ಹುಲಿವೇಷ ತಂಡಗಳು ಭಾಗವಹಿಸಲಿವೆ ಎಂದು ರಕ್ಷಣಾಪುರ ಜವನೆರ್ ಅಧ್ಯಕ್ಷ ನವೀನ್ ಎನ್. ಶೆಟ್ಟಿ ತಿಳಿಸಿದರು.
ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು ಎಂದರು.
ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ
ಪಿಲಿಪರ್ಬ ಸೀಸನ್–4 ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹2 ಲಕ್ಷ, ದ್ವಿತೀಯ ಬಹುಮಾನವಾಗಿ ₹1 ಲಕ್ಷ, ತೃತೀಯ ಬಹುಮಾನವಾಗಿ ₹50 ಸಾವಿರ ಹಾಗೂ ಚತುರ್ಥ ಬಹುಮಾನವಾಗಿ ₹30 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿಯೂ ಅತ್ಯುತ್ತಮ ಹುಲಿಕುಣಿತಗಾರ, ಕರಿಹುಲಿ, ಮರಿಹುಲಿ ಹಾಗೂ ತಾಸೆ ವಿಭಾಗಗಳಿಗೆ ವಿಶೇಷ ನಗದು ಬಹುಮಾನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.

ಪಿಲಿಪರ್ಬದ ಅಂಗವಾಗಿ ಮಂಗಳೂರಿನ ಜಿ. ಸ್ಟಾರ್ ಡ್ಯಾನ್ಸ್ ಸ್ಟುಡಿಯೊ ವತಿಯಿಂದ ನೃತ್ಯ ವೈಭವ ನಡೆಯಲಿದೆ. ವಯೊಲಿನ್, ಚೆಂಡೆ ಹಾಗೂ ಕೊಳಲಿನ ಸಮ್ಮಿಲನದೊಂದಿಗೆ ಶ್ರೀ ಗುರು ಚೆಂಡೆ ಬಳಗದ ವಿಶೇಷ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಲಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಹಾಗೂ ಚಲನಚಿತ್ರ ನಟಿ ರೂಪ ವರ್ಕಾಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ತುಳು ಚಲನಚಿತ್ರ ನಟಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನವೀನ್ ಎನ್. ಶೆಟ್ಟಿ ವಿವರಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕರಾವಳಿಯ ಜನಪದ ಆಚರಣೆಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವ್ಯಾಪಕವಾಗಿ ಪರಿಚಯಿಸುವ ಉದ್ದೇಶದಿಂದ ಪಿಲಿಪರ್ಬ ಆಯೋಜಿಸಲಾಗುತ್ತಿದೆ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಸಹಕಾರದೊಂದಿಗೆ, ಈ ಹಿಂದೆ ಮಂಗಳೂರು, ಪುತ್ತೂರು ಹಾಗೂ ಉಡುಪಿಗೆ ಸೀಮಿತವಾಗಿದ್ದ ಹುಲಿವೇಷ ಸ್ಪರ್ಧೆಯನ್ನು ಕಾಪುವಿನಲ್ಲಿಯೂ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಿಲಿಪರ್ಬ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ರಕ್ಷಣಾಪುರ ಜವನೆರ್ ಪದಾಧಿಕಾರಿಗಳಾದ ಸುಧೀರ್ ಕರ್ಕೇರ ಹಾಗೂ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *