×
Our website is made possible by displaying online advertisements to our visitors. Please consider supporting us by whitelisting our website.
  • 9880645340

*ಆಕರ್ಷಕ ಭಾಷಣದಿಂದ ಅಚ್ಚೇದಿನ್ ತರಲು ಸಾಧ್ಯವಿಲ್ಲ ಎಂಬುದನ್ನು ಮೋದಿಯವರು ತಿಳಿದುಕೊಳ್ಳಲಿ : ರಮೇಶ್ ಕಾಂಚನ್.*

ದೇಶದ ಜನರು ಒಂದು ವರ್ಷಗಳ ಕಾಲ ವಿದೇಶ ಪ್ರವಾಸ ಮಾಡಬೇಡಿ, ಪೆಟ್ರೋಲ್ ಡಿಸೇಲ್ ಮಿತವಾಗಿ ಬಳಸಿ, ಚಿನ್ನ ಖರೀದಿಸಬೇಡಿ ಎಂಬ ಮುತ್ತಿನ ಮಾತುಗಳನ್ನಾಡಿ ಪ್ರಧಾನಿ ನರೇಂದ್ರ ಮೋದಿಯವರೇ ಮೇ 15ರಿಂದ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಇವರು ನೀಡಿದ ಹೇಳಿಕೆ ನಿಜಕ್ಕೂ ಬಾಲಿಶತನದ್ದಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್ ವ್ಯಂಗವಾಡಿದ್ದಾರೆ.

ತಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶವು ಪ್ರತಿಯೊಂದು ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದು ಹಿಂದಿನ ಸರಕಾರಗಳು ದೇಶಕ್ಕೆ ಏನು ಕೊಡುಗೆ ನೀಡಿಲ್ಲ ಎನ್ನುವ ಬೊಗಳೆ ಬಿಡುವ ಪ್ರಧಾನಿ ಮೋದಿ ಯುದ್ದದ ನೆಪವಿಟ್ಟು ಜನರು ಪೆಟ್ರೋಲ್ ಡಿಸೇಲ್, ಗ್ಯಾಸ್ ಮಿತವಾಗಿ ಬಳಸಿ ಎನ್ನುತ್ತಿರುವುದು ಇವರ ವೈಫಲ್ಯಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದ ಜನರಿಗೆ ಉಪದೇಶ ಮಾಡುವ ಪ್ರಧಾನಿ ಮೋದಿ ಮೊದಲು ತಾವು ಕೂಡ ಅದರಂತೆ ಬದುಕುವ ಕೆಲಸ ಮಾಡಬೇಕಲ್ಲವೆ…?

ರೋಡ್ ಶೋ ಮೂಲಕ ಸಾವಿರಾರು ವಾಹನಗಳನ್ನು ಉಪಯೋಗಿಸಿ ಪೆಟ್ರೋಲ್, ಡಿಸೇಲ್ ವೆಚ್ಚ ಮಾಡುತ್ತಿರುವುದು ದೇಶದ ಪ್ರಧಾನಿಗಳು ಎನ್ನುವುದು ಮೋದಿ ಅವರು ಮರೆತಿದ್ದಾರೆ. ಸಮಸ್ಯೆಗಳು ಎದುರಾದಾಗ ಅದರಿಂದ ತಪ್ಪಿಸಿಕೊಳ್ಳಲು ವರ್ಷದಲ್ಲಿ ಹತ್ತು ಬಾರಿಯಾದರೂ ವಿದೇಶ ಪ್ರವಾಸ ಕೈಗೊಳ್ಳುವುದು ಕೂಡ ನರೇಂದ್ರ ಮೋದಿಯವರು. ಕಳೆದ 12 ವರ್ಷಗಳಲ್ಲಿ ದೇಶವನ್ನು ಯಾವ ಸ್ಥಿತಿಗೆ ತರಲಾಗಿದೆ ಎಂದರೆ ಜನರು ಏನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು ಮತ್ತು ಎಲ್ಲಿಗೆ ಹೋಗಬಾರದು ಎಂಬುದನ್ನೂ ಹೇಳುವ ಮಟ್ಟಕ್ಕೆ ಕೆಟ್ಟ ಪರಿಸ್ತಿತಿ ಬಂದಿದೆ.

ಈ ಹಿಂದೆ ಮಹಾಮಾರಿ ಕೋರೊನಾ ಬಂದಾಗ ತಟ್ಟೆ ಬಡಿಯಲು, ಮೊಬೈಲ್ ಟಾರ್ಚ್ ಬಳಸಲು ಹೇಳಿ ಜನರನ್ನು ಮಂಗ ಮಾಡಿದ ಪ್ರಧಾನಿ ಮೋದಿ ಮತ್ತೆ ಜನರಿಗೆ ತ್ಯಾಗ ಮಾಡುವಂತೆ ಕರೆ ನೀಡಿದ್ದಾರೆ. ಚಿನ್ನ ಖರೀದಿಸಬೇಡಿ, ವಿದೇಶಗಳಿಗೆ ಪ್ರಯಾಣಿಸಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ರಸಗೊಬ್ಬರ ಹಾಗೂ ಖಾದ್ಯ ತೈಲ ಬಳಕೆಯನ್ನು ತಗ್ಗಿಸಿ, ಮೆಟ್ರೊದಲ್ಲಿ ಸಂಚರಿಸಿ ಮತ್ತು ಮನೆಯಿಂದಲೇ ಕೆಲಸ ಮಾಡಿ ಎಂದು ಅವರು ಸೂಚಿಸಿದ್ದಾರೆ.

ಪ್ರಧಾನಿ ಮೋದಿಯವರಿಗೆ ದೇಶವನ್ನು ಮುನ್ನಡೆಸುವ ತಾಕತ್ತು ಇಲ್ಲ ಎಂದು ತೋರಿಸಲು ಅವರ ಮಾತುಗಳೇ ಅವರ ವೈಫಲ್ಯಕ್ಕೆ ಸಾಕ್ಷಿಯಾಗಿವೆ.
ಕರ್ನಾಟಕಕ್ಕೆ ಬಂದು ಇಂತಹ ಬಾಲಿಶ ಮಾತುಗಳೊಂದಿಗೆ ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನೂ ಟೀಕಿಸಿರುವ ಪ್ರಧಾನಿಗಳು ಎರಡು ದಿನಗಳ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದ ಪಶ್ಚಿಮ ಬಂಗಾಳದಲ್ಲಿ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಘೋಷಣೆ ಮಾಡಿದ್ದು ಯಾಕೆ..? ಇದರ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಉತ್ತರವೇನು..?
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ದೇಶದ ಜನತೆಗೆ ಅರಿವಾಗಿದೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಇದಕ್ಕೆ ಸೂಕ್ತವಾದ ಪರಿಹಾರ ನೀಡಬೇಕಾದ ಪ್ರಧಾನಿ ಮೋದಿ ಉಪದೇಶ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಕರ್ನಾಟಕದಿಂದ ಆಯ್ಕೆಯಾದ ಬಿಜೆಪಿ ಸಂಸದರು ಹಾಗೂ ಬಿಜೆಪಿ ಶಾಸಕರಿಗೆ ಇವರ ಈ ಕೆಟ್ಟ ಆಡಳಿತವನ್ನು ಪ್ರಶ್ನಿಸುವ ಧೈರ್ಯ ಇಲ್ಲವೇ..? ಪ್ರತಿಯೊಂದು ವೈಫಲ್ಯಕ್ಕೆ ನೆಹರೂ, ಮನಮಹೋನ್ ಸಿಂಗ್ ಸೇರಿದಂತೆ ಕಾಂಗ್ರೆಸ್ ಪಕ್ಷವನ್ನು ದೂರುವ ದೇಶದ ಪ್ರಧಾನಿ ಹಾಗೂ ಬಿಜೆಪಿ ಭಕ್ತರು ಚಿನ್ನ ಖರೀದಿಸಬೇಡಿ, ವಿದೇಶಗಳಿಗೆ ಪ್ರಯಾಣಿಸಬೇಡಿ, ಪೆಟ್ರೋಲ್ ಕಡಿಮೆ ಬಳಸಿ, ರಸಗೊಬ್ಬರ ಹಾಗೂ ಖಾದ್ಯ ತೈಲ ಬಳಕೆಯನ್ನು ತಗ್ಗಿಸಿ, ಮೆಟ್ರೊದಲ್ಲಿ ಸಂಚರಿಸಿ ಮತ್ತು ಮನೆಯಿಂದಲೇ ಕೆಲಸ ಮಾಡಿ ಎಂಬ ಪ್ರಧಾನಿ ಮೋದಿಯವರ ಬಿಟ್ಟಿ ಉಪದೇಶಕ್ಕೆ ಯಾರನ್ನು ದೂರುತ್ತೀರಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *