ಕಾರ್ಕಳ: ಕಾರ್ಕಳ ಜೋಡು ರಸ್ತೆಯಲ್ಲಿ ರಾಜಾಪುರ ಸಾರಸ್ವತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ತ್ರಿಂಶತಿ ಸಂಭ್ರಮದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡ ಸಹಕಾರಸಿಂಧೂರ’ ವಾಣಿಜ್ಯ ಸಂಕೀರ್ಣ ಹಾಗೂ ಸೊಸೈಟಿಯ 30ನೇ ವರ್ಷದ ಸಂಭ್ರಮ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.
ಗೋವಾದ ಕೈವಲ್ಯ ಮಠದ ಶಿವಾನಂದ ಸರಸ್ವತಿ ಸ್ವಾಮೀಜಿ ಕಟ್ಟಡವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಒಗ್ಗಟ್ಟಿನ ಸಹಯೋಗವೇ ಸಮಾಜದ ನಿಜವಾದ ಶಕ್ತಿಯಾಗಿದ್ದು, ಸೇವೆಯೇ ಅದರ ಮೂಲ ಮಂತ್ರವಾಗಲಿ’ ಎಂದು ಗೋವಾದ ಶ್ರೀ ಸಂಸ್ಥಾನ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. . ಸಹಕಾರಿ ತತ್ವವೇ ಸಮಾಜದ ಬಲವಾಗಿದ್ದು, ಸೇವಾಭಾವದೊಂದಿಗೆ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯ ಎಂದು ಅವರು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ಆತ್ಮನಿರ್ಭರತೆಗೆ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ರಾಜಾಪುರ ಸೊಸೈಟಿ ಸಹಕಾರಿ ಕ್ಷೇತ್ರದಲ್ಲಿ ಮಾದರಿಯ ಸಂಸ್ಥೆ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ, ರಾಜಾಪುರ ಸೊಸೈಟಿ ಸಹಕಾರಿ ಕ್ಷೇತ್ರದಲ್ಲಿ ಮಾದರಿಯ ಸಂಸ್ಥೆಯಾಗಿದ್ದು, ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು. “ಸಹಕಾರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದೊಂದಿಗೆ ಬೆಳೆಯಬೇಕು. ಸೊಸೈಟಿಯ ಬೆಳವಣಿಗೆ ಸಮಾಜದ ಅಭಿವೃದ್ಧಿಗೆ ಕಾರಣವಾಗಬೇಕು, ಸಹಕಾರಿ ಚಟುವಟಿಕೆಗಳು ವಿಸ್ತರಿಸಿ ಸಾವಿರಾರು ಮಂದಿಗೆ ನೆರವಾಗುತ್ತಿದ್ದು, ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, 1996ರಲ್ಲಿ ಆರಂಭವಾದ ಸಂಸ್ಥೆ ಇಂದು 30 ವರ್ಷಗಳ ಯಶಸ್ವಿ ಪಯಣ ಪೂರೈಸಿದೆ, ಪೇಜಾವರ ವಿಶ್ವೇಶ್ವರತೀರ್ಥ ಸ್ವಾಮೀಜಿಗಳ ಆಶೀರ್ವಾದದಿಂದ ಸಂಸ್ಥೆ ಬೆಳವಣಿಗೆ ಕಂಡಿದ್ದು, ಸದಸ್ಯರ ವಿಶ್ವಾಸ, ಸಿಬ್ಬಂದಿಗಳ ಸಹಕಾರ ಮತ್ತು ನಿರ್ದೇಶಕ ಮಂಡಳಿಯ ಪರಿಶ್ರಮದಿಂದ ಉತ್ತಮ ಹೆಸರು ಗಳಿಸಿದೆ ಎಂದರು. ಕೇಂದ್ರ ಕಚೇರಿ, 2016ರ ಸಭಾಭವನ ಹಾಗೂ ಇದೀಗ ನಿರ್ಮಿತವಾದ “ಸಹಕಾರ ಸಿಂಧೂರ” ಸಂಕೀರ್ಣ ಸಂಸ್ಥೆಯ ಪ್ರಮುಖ ಸಾಧನೆಗಳಾಗಿವೆ. ಕಟ್ಟಡದ ಶೇಕಡಾ 97 ರಷ್ಟು ಭಾಗ ಈಗಾಗಲೇ ಬಾಡಿಗೆಗೆ ನೀಡಲಾಗಿದ್ದು, ಭಾರತ್ ಸಿನೆಮಾಸ್ ಕೂಡ ಆರಂಭವಾಗಲಿದೆ ಎಂದು ತಿಳಿಸಿದರು.
ಯಾವುದೇ ದೋಷವಿಲ್ಲದ ವ್ಯವಹಾರ: ಡಾ.ಎಂ.ಎನ್. ರಾಜೇಂದ್ರ ಕುಮಾರ್
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸೊಸೈಟಿ ಮೂರು ದಶಕಗಳಿಂದ ಯಾವುದೇ ದೋಷವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಏಳು ಶಾಖೆಗಳ ಮೂಲಕ ದೊಡ್ಡ ಮಟ್ಟದ ವ್ಯವಹಾರ ನಡೆಸುತ್ತಿದೆ ಎಂದರು. ಮಹಿಳಾ ಸಾಲಗಳ ಮರುಪಾವತಿ ಪ್ರಮಾಣ 99.9% ಇರುವುದನ್ನು ಉದಾಹರಿಸಿ, ಸಂಸ್ಥೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸೊಸೈಟಿ ₹254 ಕೋಟಿ ಠೇವಣಿ ಸಂಗ್ರಹಿಸಿರುವುದು ಮಹತ್ವದ ಸಾಧನೆ ಎಂದು ಹೇಳಿದರು. ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಕೊರೊನಾ ಸಮಯದಲ್ಲಿಯೂ ಸೊಸೈಟಿ ನೀಡಿದ ಸೇವೆ ಶ್ಲಾಘನೀಯವಾಗಿದ್ದು, “ಸಹಕಾರ ಸಿಂಧೂರ” ಸಂಕೀರ್ಣ ಜೋಡುರಸ್ತೆ ಭಾಗದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸೊಸೈಟಿ ಬ್ಯಾಂಕಿಂಗ್ ಸೇವೆಗಳಷ್ಟೇ ಅಲ್ಲದೆ ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದೆ ಎಂದರು.
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸೊಸೈಟಿ ನಿರಂತರವಾಗಿ ಹೊಸ ಸಾಧನೆಗಳನ್ನು ಸಾಧಿಸುತ್ತಿದ್ದು, ಜೋಡುರಸ್ತೆ ಭಾಗದ ಅಭಿವೃದ್ಧಿಗೂ ಪೂರಕವಾಗಿದೆ ಎಂದರು. ಕೊರೊನಾ ಕಾಲದಲ್ಲೂ ಮಾಡಿದ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, “ಸಹಕಾರ ಸಿಂಧೂರ” ಸಂಕೀರ್ಣ ಹೊಸ ಹೆಜ್ಜೆಯಾಗಿದೆ ಎಂದು ಹೇಳಿದರು.
ಮುನಿಯಾಲು ಉದಯ್ ಕುಮಾರ್ ಶೆಟ್ಟಿ,ಮಾತನಾಡಿ,
ರಾಜಪುರ ಸಮಾಜ ಒಂದು ಮಾದರಿ ಸಮಾಜ. ಸಹಕಾರಿ ಕ್ಷೇತ್ರದಲ್ಲೂ ಈ ಸಮಾಜದ ಸಾಧನೆ ಬಹುಮುಖ್ಯವಾಗಿದೆ ಎಂದರು.
ಸದಾಶಿವ ಪ್ರಭು ಬಿ., ಗೋಕುಲದಾಸ್ ನಾಯಕ್, ಸಂತೋಷ್ ವಾಗ್ಳೆ, ಲಾವಣ್ಯ ಕೆ.ಆರ್., ಸುಧೀರ್ ಕುಮಾರ್, ಪುಂಡಲೀಕ ನಾಯಕ್, ಚೇತನ್ ನಾಯಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಿಇಒ ಸುರೇಂದ್ರ ನಾಯಕ್ ದಂಪತಿಗಳು ಸ್ವಾಮೀಜಿಗಳಿಗೆ ಪಾದಪೂಜೆ ಸಲ್ಲಿಸಿದರು. ಇದೇ ವೇಳೆ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೀರ್ತಿ ಶೆಣೈ ಪ್ರಾರ್ಥಿಸಿದರು. ನೀರೆ ರವೀಂದ್ರ ನಾಯಕ್ ಸ್ವಾಗತಿಸಿದರು. ಸಿಇಒ ಸುರೇಂದ್ರ ನಾಯಕ್ ಧನ್ಯವಾದ ಅರ್ಪಿಸಿದರು. ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

