×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಸೋಲಿನಿಂದ ಎದೆಗುಂದದಿರಿ… ನಾನಿರುವೆ ಸದಾ ನಿಮ್ಮೊಂದಿಗೆ.. ; ಕಾರ್ಯಕರ್ತರಿಗೆ ಸೊರಕೆ ಅಭಯ

ಸೋಲು- ಗೆಲುವು ಎಲ್ಲಾ ರಂಗಗಳಲ್ಲಿಯೂ ಸಹಜ, ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮೂಲಕ, ಸೋಲಿನ ಪರಾಮರ್ಶೆ ನಡೆಸಿ ಎಲ್ಲಿ ಎಡವಿದ್ದೇವೆಯೋ ಅಲ್ಲಿ ಎಚ್ಚೆತ್ತು ಕ್ರೀಡಾಸ್ಪೂರ್ತಿಯೊಂದಿಗೆ ಇನ್ನಷ್ಟು ಬಲಿಷ್ಠವಾಗಿ ಸಂಘಟನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷ ಬಲವರ್ಧನೆಗೆ ಪಣ ತೊಡೋಣ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಇಂದು, ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ “ರಾಜೀವ್ ಭವನ” ದಲ್ಲಿ ಇತ್ತೀಚೆಗೆ ನಡೆದ ವಿ.ಸ. ಚುನಾವಣಾ ಕಾರ್ಯದಲ್ಲಿ ಅವಿರತ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಕೃತಜ್ಞತಾರ್ಪಣಾ ಸಭೆ”ಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಕರ್ನಾಟಕ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿ ಪಕ್ಷವನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದರೆ, ಕರಾವಳಿ ಭಾಗದಲ್ಲಿ ಅದಕ್ಕೆ ವ್ಯತಿರಿಕ್ತವಾದ ಫಲಿತಾಂಶ ಬಂದಿರುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿಯಾಗಿದೆ. ಚುನಾವಣಾ ಕಾರ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ನಿಷ್ಠೆ ಮತ್ತು ಅಭಿಮಾನದಿಂದ ಅವಿರತ ಶ್ರಮವಹಿಸಿದ್ದಾರೆ, ಆದರೆ ಮತದಾರರ ಮನ ಮುಟ್ಟುವಲ್ಲಿ ಸಂಪೂರ್ಣ ಯಶಸ್ಸು ಕಾಣಲು ವಿಫಲರಾಗಿರುವುದು ಹಾಗೂ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಡೆದ ವ್ಯವಸ್ಥಿತ ಅಪಪ್ರಚಾರ ಹಾಗೂ ಹಣಬಲದ ಮುಂದೆ ನಮ್ಮ ಪ್ರಾಮಾಣಿಕ ಜನಸೇವೆ ಮಂಕಾಗಿ ಹೋಯಿತು. ಸೋಲಾಯಿತೆಂದು ಕಾರ್ಯಕರ್ತರು ಯಾರೂ ವಿಚಲಿತರಾಗದೆ… ಯಾವುದೇ ಸಂದರ್ಭದಲ್ಲಿಯೂ ಎದೆಗುಂದಬೇಡಿ, ನಾನಂತೂ ನಿಮ್ಮೊಂದಿಗೆ ಈ ಹಿಂದೆ ಯಾವ ರೀತಿಯಲ್ಲಿ ನಿಮಗೆ ಸಹಕರಿಸಿ, ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬೆಂಬಲಿಸುತ್ತಿದ್ದೇನೋ ಇನ್ನು ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು. ನಿಮ್ಮ ಸಹಕಾರ, ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ… ಪಕ್ಷದ ಕಾರ್ಯಕರ್ತರ ಜೊತೆಗೆ ನನಗಿರುವ ಅವಿನಾಭಾವ ಸಂಬಂಧವನ್ನು ನಾನು ಯಾವತ್ತಿಗೂ ಕಡಿದು ಕೊಳ್ಳುವುದಿಲ್ಲ, ಕಾರ್ಯಕರ್ತರ ಪ್ರೀತಿ-ಅಭಿಮಾನವೇ ನಾನು ರಾಜಕೀಯದಲ್ಲಿ ಸಂಪಾದಿಸಿರುವ ಬಹುದೊಡ್ಡ ಆಸ್ತಿ ಎಂದು ಭಾವನಾತ್ಮಕವಾಗಿ ಹೇಳುವ ಮೂಲಕ ನೆರೆದಿದ್ದ ಕಾರ್ಯಕರ್ತರು ಕೂಡ ಭಾವುಕರಾಗಿ ಹಲವರ ಕಣ್ಣಂಚಿನಲ್ಲಿ ಬಾಷ್ಪ ಹನಿ ಮಿನುಗುತ್ತಿದ್ದುದು ಕಂಡು ಬಂತು. ಸೊರಕೆಯವರು ಮುಂದೆ ಮಾತನಾಡುತ್ತಾ, ಕಾಪು ಕ್ಷೇತ್ರದಲ್ಲಿ ನಮಗೆ ಸೋಲಾಗಿರಬಹುದು, ಆದರೆ ರಾಜ್ಯದ ಸರ್ಕಾರ ಕಾಂಗ್ರೆಸ್ ನದ್ದಾಗಿದೆ, ಹಾಗಾಗಿ ಅದರ ಪ್ರಯೋಜನವನ್ನು ಪಡೆದು ಅಭಿವೃದ್ಧಿಯ ದೃಷ್ಟಿಕೋಣ ದೊಂದಿಗೆ ಮುಂದೆ ಸಾಗೋಣ, ಸರ್ಕಾರದ ಸವಲತ್ತುಗಳನ್ನು ಮತ್ತು ಯೋಜನೆಗಳನ್ನು ಜನರಿಗೆ ತಲುಪಿಸಲು ಪ್ರಯತ್ನಿಸೋಣ ಈ ಮೂಲಕ ಮುಂಬರಲಿರುವ ತಾಲೂಕು ಪಂಚಾಯತ್/ ಜಿಲ್ಲಾಪಂಚಾಯತ್ ಹಾಗೂ 2024 ರ ಲೋಕಸಭಾ ಚುನಾವಣೆಗೆ ಸಜ್ಜಾಗೋಣ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಸಭೆಯಲ್ಲಿ, ಕಾರ್ಯಕರ್ತರಿಗೆ ಅಭಿಪ್ರಾಯ ಹಂಚಿಕೆಗೆ ಹಾಗೂ ಸಲಹೆ-ಸೂಚನೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಎಸ್. ಸುವರ್ಣ ವಹಿಸಿ ಮಾತನಾಡಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಗಫೂರ್, ರಾಜ್ ಶೇಖರ್ ಕೋಟ್ಯಾನ್, ಕೆ.ಪಿ.ಸಿ.ಸಿ ಸಂಯೋಜಕರಾದ ನವೀನ್ ಚಂದ್ರ ಜೆ.ಶೆಟ್ಟಿಯವರು ಮಾತನಾಡಿ ಚುನಾವಣಾ ಕಾರ್ಯನಿರ್ವಹಣೆಯ ಪರಾಮರ್ಶೆ ನಡೆಸಿದರು. ವೇದಿಕೆಯಲ್ಲಿ, ರಾಜ್ಯ ಹಿಂ. ವ. ಘಟಕಗಳ ಸಮಿತಿಯ ಕಾರ್ಯದರ್ಶಿ ಶಿವಾಜಿ ಸುವರ್ಣ ಬೆಳ್ಳೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್ , ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ವಿಕ್ರಂ ಕಾಪು, ಜಿಲ್ಲಾ ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ವಹಿದ್ ಶೇಖ್ ಉಪಸ್ಥಿತರಿದ್ದರು.
ಸಭೆಯಲ್ಲಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿತೇಂದ್ರ ಫುರ್ಟಾಡೋ, ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾಂತಲತಾ ಎಸ್. ಶೆಟ್ಟಿ, ಯುವ ಕಾಂ. ಸ. ಅಧ್ಯಕ್ಷ ರಮೀಜ್ ಹುಸೇನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ದೀಪಕ್ ಎರ್ಮಾಳ್, ಮೊಹಮ್ಮದ್ ಸಾದಿಕ್, ಪ್ರಶಾಂತ್ ಜತ್ತನ್ನ, ಸರಸು ಡಿ.ಬಂಗೇರ, ಪ್ರಭಾ ಬಿ.ಶೆಟ್ಟಿ, ವೈ.ಸುಧೀರ್, ಹಸನಬ್ಬ ಶೇಖ್, ರತನ್ ಶೆಟ್ಟಿ, ಕಿಶೋರ್ ಅಂಬಾಡಿ, ಇಂದಿರಾ ಆಚಾರ್ಯ, ಸಿಮ್ಮಿ ಡಿಸೋಜ, ಯು.ಸಿ.ಶೇಕಬ್ಬ, ಆಶಾ ಅಂಚನ್ ಕಟಪಾಡಿ, ಸುನಿಲ್ ಡಿ.ಬಂಗೇರ, ಎಚ್.ಅಬ್ದುಲ್ಲಾ, ಅಬ್ದುಲ್ ಹಮೀದ್ ಮೂಳೂರು, ದಿವಾಕರ್ ಡಿ.ಶೆಟ್ಟಿ, ರಾಜೇಶ್ ಕುಲಾಲ್, ಫರ್ಜಾನ ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ ಆನಂದ್, ಸತೀಶ್ ಚಂದ್ರ ಮೂಳೂರು, ಶ್ರೀಕರ್ ಅಂಚನ್, ಮಹೇಶ್ ಪೂಜಾರಿ ಕಟಪಾಡಿ, ಕೆ.ಎಚ್.ಉಸ್ಮಾನ್, ಹಮೀದ್ ಯೂಸುಫ್, ಶೇಖರ್ ಹೆಜಮಾಡಿ, ಕೇಶವ ಸಾಲ್ಯಾನ್,ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಸುಧೀರ್ ಕರ್ಕೇರ, ಮೊಹಮ್ಮದ್ ನಯಿಮ್, ಯಶವಂತ ಫಲಿಮಾರು, ಗೋಪಾಲ್ ಪೂಜಾರಿ ಮತ್ತಿತರ ಪ್ರಮುಖ ನಾಯಕರು, ಬ್ಲಾಕ್ ಪದಾಧಿಕಾರಿಗಳು, ವಿವಿಧ ಘಟಕ/ಸಮಿತಿಗಳ ಅಧ್ಯಕ್ಷರು/ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ಬೂತ್ ಸಮಿತಿಯ ಅಧ್ಯಕ್ಷರು/ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸೊರಕೆಯವರ ಹಿತೈಷಿಗಳು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ದಿನೇಶ್ ಕೋಟ್ಯಾನ್ ಫಲಿಮಾರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *