ಸಮಾಜದ ಕೆಳಸ್ತರದ ಕೂಲಿ ಕಾರ್ಮಿಕರು ವರ್ಷವಿಡೀ ನಿರಂತರ ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕಾಗಿ ಶ್ರಮಪಡುವುದನ್ನು ಮನಗಂಡು, ಕೇಂದ್ರದಲ್ಲಿ ಡಾ. ಮನ್ಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯು (ಮನರೇಗಾ) ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿತ್ತು.
ಆದರೆ ಇದೀಗ ಅಧಿಕಾರದಲ್ಲಿರುವ ಬಡವರ ವಿರೋಧಿ ಕೇಂದ್ರ ಸರ್ಕಾರವು, ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿ, ಇಡೀ ವಿಶ್ವಕ್ಕೇ ಆದರ್ಶಪ್ರಾಯವಾದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಅಳಿಸಿ, ಆ ಯೋಜನೆಗೆ ಗಾಂಧೀಜಿಯ ಹಂತಕ, ನಾಥೂ’ರಾಮ್’ ಗೋಡ್ಸೆಯ ಹೆಸರಿನಲ್ಲಿರುವ “ರಾಮ್ ” ಹೆಸರನ್ನು ದುರುದ್ದೇಶ ಪೂರಕವಾಗಿ ಜೋಡಿಸುವ ಮೂಲಕ ದ್ವೇಷ ರಾಜಕಾರಣದ ಪರಮಾವಧಿಗೆ ತಲುಪಿದ್ದಾರೆ, ಇದು ರಾಷ್ಟ್ರಪಿತನಿಗೆ ಮಾಡಿದ ಘನಘೋರ ಅವಮಾನ ಮತ್ತು ಅಕ್ಷಮ್ಯ ಅಪರಾಧ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಯವರು ಹೇಳಿದರು.
ಇಂದು ಗಾಂಧೀಜಿ ಜೀವಂತ ವಿಲ್ಲದಿದ್ದರೂ ಗಾಂಧೀಜಿ ಯವರ ಗ್ರಾಮ ಸ್ವರಾಜ್ಯದ ಕನಸು ಜೀವಂತವಿದೆ, ಇದೀಗ ಬಿ. ಜೆ. ಪಿ ಯ ಮಹಾತ್ಮಾ ಗಾಂಧಿ ವಿರೋಧಿ ಸಿದ್ಧಾಂತದಿಂದಾಗಿ ನಾಥೂ ‘ರಾಮ್ ‘ ಗೋಡ್ಸೆ ಹೆಸರನ್ನು ಮುನ್ನೆಲೆಗೆ ತಂದು ಗಾಂಧೀಜಿಯವರನ್ನು ಮತ್ತು ಅವರ “ಗ್ರಾಮ ಸ್ವರಾಜ್ಯ” ದ ಕನಸನ್ನು ಮತ್ತೊಮ್ಮೆ ಕೊಲ್ಲುವಂತಹ ಪ್ರಯತ್ನಕ್ಕೆ ಕೈ ಹಾಕಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಇದರ ವಿರುದ್ಧ ರಾಜ್ಯಾದ್ಯಂತ ಆಂದೋಲನ ನಡೆಸುವ ಮೂಲಕ “ಮನರೇಗಾ” ಮರು ಜಾರಿಗೆ ತರಲು ಪ್ರಬಲ ಹೋರಾಟ ನಡೆಸಲಿದೆ ಎಂದರು.
ಅವರು, ಇದರ ಪೂರ್ವಸಮಾಲೋಚನಾ ಸಭೆಯ ಪ್ರಯುಕ್ತ, ಕಾಪು – ಪಡು ಮತ್ತು ಉಳಿಯಾರಗೋಳಿ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಸದಾ ಬಡವರ ಮತ್ತು ಕಾರ್ಮಿಕ ವಿರೋಧಿ ಧೋರಣೆ ತೋರುವ ಕೇಂದ್ರದ ಬಿ. ಜೆ. ಪಿ ಸರ್ಕಾರವು, ಬಡ ಕಾರ್ಮಿಕರ ಜೀವನೋಪಾಯದ ಆದಾಯದ ಮೂಲಕ್ಕೆ ಕತ್ತರಿ ಹಾಕುವ ಮೂಲಕ ಬಡವರ ಅನ್ನದ ಬಟ್ಟಲನ್ನೇ ಕಸಿದುಕೊಳ್ಳಲು ವ್ಯವಸ್ಥಿತ ಹುನ್ನಾರ ನಡೆಸಿರುವುದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದೆ ಎಂದರು.
ಮುಂದುವರಿದು,ಎಸ್. ಐ. ಆರ್ (ಸಮಗ್ರ ವಿಶೇಷ ಪರಿಷ್ಕರಣೆ) ನೆಪದಲ್ಲಿ, ನಿರ್ದಿಷ್ಟ ಮತದಾರರ ಹೆಸರನ್ನು ಅಳಿಸಿ ಹಾಕುವ ವ್ಯವಸ್ಥಿತ ಪಿತೂರಿಯ ವಿರುದ್ಧ ಜನರಿಗೆ ಅರಿವು ಮೂಡಿಸಬೇಕು, ಮತ್ತು ಮತದಾರರ ಪಟ್ಟಿಯಿಂದ ಒಂದು ಹೆಸರು ಕೂಡಾ ತಪ್ಪಿಹೋಗದಂತೆ ಪಕ್ಷದ ಕಾರ್ಯಕರ್ತರು ಮುತುವರ್ಜಿ ವಹಿಸಿ ಜನರಿಗೆ ಸಹಾಯ ಮಾಡಬೇಕೆಂದು ಸೂಚಿಸಿದರು.
ಈ ನಿಟ್ಟಿನಲ್ಲಿ, ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರ ನೆಲೆಯಲ್ಲಿ, ವಿನಯ್ ಕುಮಾರ್ ಸೊರಕೆ ಯವರು ಕಾಪು ವಿ. ಸ. ಕ್ಷೇತ್ರದ ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಗಳಿಗೆ ಭೇಟಿ ನೀಡಿ, ಕಾರ್ಯಕರ್ತರು ಮತ್ತು ಗ್ರಾಮಸ್ಥರೊಂದಿಗೆ ಸಮಾಲೋಚಿಸಿ, ಜನಾಂದೋಲನದ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು.
ಸಭೆಯನ್ನುದ್ದೇಶಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ವೈ. ಸುಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಕಾಪು ದಿವಾಕರ್ ಶೆಟ್ಟಿಯವರು ಮಾತನಾಡಿ ಉಪಯುಕ್ತ ಮಾಹಿತಿ ನೀಡಿದರು.
ಸಭೆಯಲ್ಲಿ, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕ್ರಂ ಕಾಪು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಬ್ಲಾಕ್ ಇಂಟಕ್ ಘಟಕದ ಅಧ್ಯಕ್ಷ ಸುಮನ್ ಬೋಳಾರ್, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷ ರಿಯಾಜ್ ಮುದರಂಗಡಿ, ಕಾಪು ಪುರಸಭೆ ವಿಪಕ್ಷ ನಾಯಕಿ ಫರ್ಜಾನ ಸಂಜಯ್, ಯೋಜನಾ ಪ್ರಾಧಿಕಾರ ಸದಸ್ಯ ಲಕ್ಶ್ಮೀಶ ತಂತ್ರಿ, ಕಾಪು ಪಡು ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದೇವರಾಜ್ ಎ. ಕೋಟ್ಯಾನ್, ಉಳಿಯಾರಗೋಳಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಪುರಸಭೆಯ ಸದಸ್ಯರು, ಬೂತ್ ಅಧ್ಯಕ್ಷರು, ಬಿ. ಎಲ್. ಎ-2 ಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಸ್ವಾಗತಿಸಿದರು, ಪ್ರಭಾಕರ್ ಪೂಜಾರಿ ವಂದಿಸಿದರು.

