ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಿದರು.ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಸನ್ನಿಧಿಯ ಮುಂದೆ ಇರುವ ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಿದ ಮೋದಿ, ಪವಿತ್ರ ಕನಕನ ಕಿಂಡಿಗೆ ಚಿನ್ನದ ಹೊದಿಕೆ ಸಮರ್ಪಿಸಿದರು. ಆ ಬಳಿಕ ಪವಿತ್ರ ಕನಕನ ಕಿಂಡಿ ಮೂಲಕ ಭಗವಾನ್ ಶ್ರೀ ಕೃಷ್ಣನ ದಿವ್ಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಯೊಬ್ಬರೂ ತಮ್ಮ ತಾಯಿಯ ಹೆಸರಲ್ಲಿ ಒಂದು ಮರ ನೆಡುವಂತೆ, ತಲಾ ಒಬ್ಬನಾದರೂ ಬಡವನಿಗೆ ಸಹಾಯ ಮಾಡುವಂತೆ, ಸ್ವದೇಶಿ, ಆತ್ಮನಿರ್ಭರ ಭಾರತಕ್ಕೆ ಬೆಂಬಲ, ಸಾವಯವ ಕೃಷಿಗೆ ಒತ್ತು, ಆರೋಗ್ಯಪೂರ್ಣ ಬದುಕು, ಯೋಗಾಭ್ಯಾಸ, ಹಸ್ತಪ್ರತಿಗಳ ಸಂರಕ್ಷಣೆಯ ಸಂಕಲ್ಪ ತೊಡುವಂತೆ ಅವರು ಹೇಳಿದರು. ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ ಕ್ಷೇತ್ರ. ನನ್ನ ಜನ್ಮ ಗುಜರಾತ್ ನಲ್ಲಿ ಆಗಿದ್ದು. ಆದ್ರೂ ಗುಜರಾತ್ ಮತ್ತು ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆಧ್ಯಾತ್ಮಿಕ ಖುಷಿ ಸಿಕ್ಕಂತಾಗಿದೆ. ಲಕ್ಷ ಕಂಠದ ಮೂಲಕ ಗೀತಾ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದಂತಾಗಿದೆ. ಈ ಕೆಲಸ ಮಾಡಿರೋ ಸುಗುಣೇಂದ್ರ ಶ್ರೀಗಳಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರಲ್ಲದೇ ಉಡುಪಿಯು ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಜನ ಸಂಘದಲ್ಲಿ ನಮ್ಮ ವಿ.ಎಸ್.ಆಚಾರ್ಯರನ್ನ ಆಯ್ಕೆ ಮಾಡಿದ್ದು ಉಡುಪಿಯ ಜನ. ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ. ಮಧ್ವಾಚಾರ್ಯರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಇಂದಿಗೂ ಧರ್ಮಕಾರ್ಯದಲ್ಲಿ ತೊಡಗಿವೆ ಎಂದು ಶ್ಲಾಘಿಸಿದರು.
ಕನಕದಾಸರಿಗೆ ನಮಿಸುವ ಪುಣ್ಯ ಇಂದು ನನಗೆ ಸಿಕ್ಕಿದೆ. ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ. ನಮ್ಮ ಮೊದಲ ಸಂಕಲ್ಪ ‘ನೀರು ನದಿಯ ರಕ್ಷಿಸೋದು’ ಆಗಲಿ. ಒಬ್ಬ ಬಡವನ ಉದ್ಧಾರ ಮಾಡಲು ಪ್ರಯತ್ನಿಸೋಣ. ಉತ್ತಮ ಆರೋಗ್ಯ, ಯೋಗ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿ.ವೈ ರಾಘವೇಂದ್ರ, ಮುಖಂಡ ರಾದ ಬಿ. ವೈ. ವಿಜಯೇಂದ್ರ, ರಾಜ್ಯ ಸಭಾ ಸಂಸದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಶಾಸಕರಾದ ವಿ ಸುನಿಲ್ ಕುಮಾರ್, ಯಶ್ ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಎ ಕಿರಣ್ ಕುಮಾರ್ ಕೊಡ್ಲಿ ಹಾಗೂ ಗುರ್ಮೆ ಸುರೇಶ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

