ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ವಿಭಾಗ, ಉಡುಪಿ ಜಿಲ್ಲೆ ಮತ್ತು ದಂಡತೀರ್ಥ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಕಾಪು ತಾಲೂಕು ಮಟ್ಟದ ಬಾಲಕ - ಬಾಲಕಿಯರ ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಮಕರ ಕನ್ಸ್ಟ್ರಕ್ಷನ್ಸ್ ಇದರ ನಿರ್ದೇಶಕರಾದ ಸುಧಾಕರ ಶೆಟ್ಟಿ ಮಲ್ಲಾರ್ ಉದ್ಘಾಟಿಸಿ, ಸ್ಪರ್ಧಾ ಮನೋಭಾವನೆಯಿಂದ ಆಡಿ ಜಿಲ್ಲಾ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ಪರಿಸರಕ್ಕೆ ಕೀರ್ತಿ ತರುವ ವಿದ್ಯಾರ್ಥಿಗಳಾಗಿ ಮೂಡಿಬನ್ನಿ ಎಂಬ ಸಂದೇಶವನ್ನು ನೀಡಿದರು.
ಗೌರವ ಉಪಸ್ಥಿತಿಯನ್ನು ಪಡೆದ ಉಡುಪಿ ಜಿಲ್ಲಾ ಪದವಿಪೂರ್ವ ವಿಭಾಗದ ಉಪನಿರ್ದೇಶಕರಾದ, ಶ್ರೀ ಮಾರುತಿ ಇವರು, ಕ್ರಿಕೆಟ್ ಆಟದ ನಡುವೆ ಮರೆಯಾಗುತ್ತಿರುವ ಕಬಡ್ಡಿ ಪಂದ್ಯಾಟವು ವೇದಗಳ ಕಾಲದಿಂದಲೂ ಪ್ರಸಿದ್ಧಿಯನ್ನು ಪಡೆದಿದ್ದು, ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ದೈಹಿಕ ಹಾಗೂ ಮಾನಸಿಕ ಪ್ರಬುದ್ಧತೆಯನ್ನು ಉಳಿಸಿ - ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂಬ ಸಂದೇಶವನ್ನು ನೀಡಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಂಚಾಲಕರಾದ ಡಾ|| ಕೆ. ಪ್ರಶಾಂತ್ ಶೆಟ್ಟಿಯವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಕಾಪು ತಾಲೂಕು ಕ್ರೀಡಾ ಸಂಯೋಜಕರಾದ ಜೋಸೆಫ್ ಡಿ'ಸೋಜ, ಕಾಪು ತಾಲೂಕು ಕ್ರೀಡಾ ಸಮಿತಿಯ ಅಧ್ಯಕ್ಷೆಯಾದ ಡಾ|| ಸುಮಾ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಗೇಬ್ರಿಯಲ್ ಮಸ್ಕರೇನ್ಹಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭಾಕರ ಶೆಟ್ಟಿ, ತೀರ್ಪುಗಾರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ವಂದಿಸಿದ ಈ ಕಾರ್ಯಕ್ರಮವನ್ನು ಶಿಕ್ಷಕಿ ರಜನಿ ನಿರೂಪಿಸಿದರು.

