ಕಾಪು ತಾಲ್ಲೂಕಿನ ಫಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದಲ್ಲಿ ಕಳೆದ 5 ತಿಂಗಳ ಹಿಂದೆ ವೃದ್ಧ ದಂಪತಿಗೆ ನೀಡಿದ್ದ ಭರವಸೆಯಂತೆ ಇಂದು ತಾತ್ಕಾಲಿಕ ಪರಿಹಾರವಾಗಿ ಸಿಮೆಂಟಿನ ಕಂಬಗಳನ್ನು ಹಾಕಿಸಿ ಕಿರುಸೇತುವೆ ನಿರ್ಮಾಣ ಮಾಡಿಕೊಟ್ಟು ತಹಶಿಲ್ದಾರ್ ಪ್ರತಿಭಾ ಆರ್ ರವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದು ಶಾಶ್ವತ ಕಾಲುಸಂಕ ನಿರ್ಮಾಣ ಮಾಡಲು ಏರ್ಪಾಡು ಮಾಡಲಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದರು. ವೃದ್ಧ ದಂಪತಿಗಳ ಸಂತಸ ಪ್ರತಿದಿನ ಅವರು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕಾಗಿತ್ತು. ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ ವಸಂತಿ (70 ವರ್ಷ) ಭೋಜ ಸಾಲ್ಯಾನ್ (74 ವರ್ಷ)
ಅವರು ನಡೆದಾಡಬೇಕಾದ ಪರಿಸ್ಥಿತಿ ಇತ್ತು. ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆ ಬೀದಿಗೆ ಬರಲು, ಇನ್ಯಾವುದೇ ಕೆಲಸಕ್ಕೂ ಈ ಬೀಳುವಂತಿರುವ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಈ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದರಿಂದ ವಸಂತ ಮತ್ತು ಭೋಜ ಸಾಲ್ಯಾನ್ ದಂಪತಿಗಳ ಮೊಗದಲ್ಲಿ ಸಂತೋಷದ ನಗು ಉಂಟಾಗಿದೆ. ಕಳೆದ ಡಿಸೆಂಬರ್ ನಲ್ಲಿ ಸ್ವತಃ ತಹಶಿಲ್ದಾರ್ ಮೇಡಂ ಸ್ವತಃ ಶಿಥಿಲ ಹಲಗೆ ಸೇತುವೆ ಮೇಲೆ ನಡೆದು ಆತಂಕ ವ್ಯಕ್ತಪಡಿಸಿ, ಶೀಘ್ರವಾಗಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಈಗ ತಾತ್ಕಾಲಿಕ ಸೇತುವೆ ನಿರ್ಮಾಣ ಆಗಿದೆ. ವಸಂತಿ(70) ಯವರ ಹೇಳಿಕೆ:
ಜೀವ ಕೈಲಿ ಹಿಡಿದು ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಗ್ರಾಮ ಪಂಚಾಯತಿ ಮತ್ತು ತಹಶಿಲ್ದಾರ್ ರವರ ಪ್ರಯತ್ನದಿಂದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿಕೊಟ್ಟಿದಾರೆ… ಇದರಿಂದಾಗಿ ನಿರಾಳ ಉಂಟಾಗಿದೆ. ಅನಾರೋಗ್ಯ ಪೀಡಿತ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹ ಇದರಿಂದ ಸಾಧ್ಯವಾಗುತ್ತದೆ. ದಿನನಿತ್ಯದ ಜೀವನ ಸುಗಮವಾಗಿದೆ. ನಮ್ಮ ಕಷ್ಟಕ್ಕೆ ಸ್ಪಂದಿಸಿ ನಮ್ಮ ಜೀವನ ಸಹ್ಯವಾಗಿಸಿದ ತಹಶಿಲ್ದಾರ್ ಮೇಡಂ ಗೆ ವಂದನೆಗಳು… ಇಂತಹವರ ಸಂತತಿ ಸಾವಿವಾಗಲಿ… ಹಾಗೆಯೇ… ಶಾಶ್ವತ ಕಾಲು ಸಂಕ ನಿರ್ಮಿಸಿಕೊಟ್ಟರೆ ಮಹದುಪಕಾರವಾಗುತ್ತದೆ ಎಂದು ಕಣ್ಣೀರಿಡುತ್ತಾರೆ ವಸಂತಿ ಅಕ್ಕ…. “ಕಷ್ಟದಲ್ಲಿ ಇರುವ ನಮ್ಮ ಮೊರೆ ತಹಶಿಲ್ದಾರ್ ಮೇಡಂ ರವರು ಆಲಿಸಿ ಹೋಗಿದ್ರು ಅದರಂತೆ … ಅವರು ಈ ಮಳೆಗಾಲಕ್ಕೆ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಟ್ಟಿದಾರೆ… ಹಾಗೂ ಇಂದು ಸ್ವತಃ ಇಲ್ಲಿಗೆ ಬಂದು ನಮಗೆ ಸಾಂತ್ವನ ಹೇಳಿ ಶಾಶ್ವತ ಕಾಲು ಸಂಕ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಅವರ ಸಾಂತ್ವನದಿಂದಾಗಿ ಬದುಕಿನಲ್ಲಿ ಆಸಕ್ತಿ ಹೆಚ್ಚಾಗಿದೆ… ” ಎಂದು ವಸಂತಿ ಆಸೆಗಣ್ಣುಗಳಿಂದ ತಹಶಿಲ್ದಾರ್ ಪ್ರತಿಭಾ ಮೇಡಂ ಕಡೆಗೆ ನೋಡುತ್ತಾರೆ. ತಹಶಿಲ್ದಾರ್ ಪ್ರತಿಭಾ ಆರ್ ರವರ ಹೇಳಿಕೆ:
ವಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ನಾನು ಈ ಹಿಂದೆ ಭರವಸೆ ನೀಡಿದ್ದಂತೆ ಗ್ರಾಮ ಪಂಚಾಯತಿ ವತಿಯಿಂದ ಸಿಮೆಂಟ್ ಕಂಬಗಳಿಂದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದೇವೆ. ಸದ್ಯದಲ್ಲೇ ಶಾಶ್ವತ ಕಾಲು ಸಂಕ ನಿರ್ಮಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಇಂದು ಈ ತಾತ್ಕಾಲಿಕ ಸೇತುವೆಯ ನಿರ್ಮಾಣದಿಂದ ಆ ವೃದ್ಧ ದಂಪತಿಗೆ ಉಂಟಾದ ಸಂತಸ ಕಂಡು ನಮಗೂ ಸಂತೋಷವಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ತಿಳಿಸಿದ್ದಾರೆ. ಗ್ರಾಮ ಪಂಚಾಯತಿಯ ಸಹಕಾರ
ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರು, ಸದಸ್ಯರು, PDO ಇವರೆಲ್ಲರ ಸಹಕಾರದಿಂದ ಇಂದು ಈ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಇಸ್ಮಾಯಿಲ್ ಫಲಿಮಾರು ಇವರು ಈ ಸಮಸ್ಯೆ ಗಮನಕ್ಕೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

