ಕಾರ್ಕಳ: ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬಯಿ, ದುಬ್ಬಾಗೆ ವಲಸೆ ಹೋಗುತ್ತಿದ್ದು, ಇವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರಾವಳಿಗೆ ಪ್ರತ್ಯೇಕ ನೀತಿ ರಚಿಸುವುದಾಗಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಘೋಷಿಸಿದರು. ಕಾರ್ಕಳದಲ್ಲಿ ರವಿವಾರ ಕಾರ್ಕಳ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಜರಗಿದ “ಕಾಂಗ್ರೆಸ್ ಕುಟುಂಬೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಜಾತಿ, ಧರ್ಮ, ದೇವರ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಆರ್‌ಟಿಇ, ಆರ್‌ಟಿಐ, ಆಹಾರ ಭದ್ರತೆ, ಉದ್ಯೋಗ ಖಾತ್ರಿ ಯೋಜನೆಗಳನ್ನು ಈ ದೇಶದ ಬಡ ಜನರ ಕಲ್ಯಾಣಕ್ಕೆ ಜಾರಿಗೆ ತಂದಿದೆ. ಅಭಿವೃದ್ಧಿ ಮತ್ತು ಜನರ ಕಲ್ಯಾಣವನ್ನು ಕಾಂಗ್ರೆಸ್ ಮೊದಲ ಆದ್ಯತೆಯಾಗಿ ಪರಿಣಮಿಸಿ ಇಲ್ಲಿಯವರೆಗೆ ಕೆಲಸ ಮಾಡಿದೆ. ಮುಂದೆಯೂ ಕರಾವಳಿಯಲ್ಲಿ ಉದ್ಯೋಗಾವಕಾಶ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತದೆ ಎಂದರು. ವಿಶೇಷ ಅನುದಾನಕ್ಕೆ ಉದಯ್ ಶೆಟ್ಟಿ ಮನವಿ ಮುನಿಯಾಲು ಉದಯ್ ಶೆಟ್ಟಿ ಪ್ರಸ್ತಾವನೆಗೈದು, ಉಡುಪಿ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮ ಗಳ ಬಗ್ಗೆ ಡಿಸಿಎಂಗೆ ತಿಳಿಸಿದರು. ಆಗುಂಬೆ ಘಾಟಿ ವಿಸ್ತರಣೆ ಮತ್ತು ಗ್ರಾಮೀಣ ಭಾಗದಲ್ಲಿ 500 ರಸ್ತೆಗಳು ಅಭಿವೃದ್ಧಿಯಾಗಬೇಕಿದ್ದು, ಸರಕಾರ ವಿಶೇಷ ಅನುದಾನ ಮಂಜೂರುಗೊಳಿಸಲು ಮನವಿ ಮಾಡಿದರು. ಕಾರ್ಕಳ ಬ್ಲಾಕ್ ಅಧ್ಯಕ್ಷ ಶುಭದ ರಾವ್ ಹಾಗೂ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್ ಸಹಿತ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವರಾದ ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಅಭಯಚಂದ್ರ ಜೈನ್, ಪ್ರಮುಖರಾದ ಮಿಥುನ್ ರೈ, ರಕ್ಷಿತ್ ಶಿವರಾಮ್, ಜಿ. ಎ. ಬಾವ, ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ, ಎಂ. ಎ. ಗಫೂರ್, ಸುರೇಂದ್ರ ಶೆಟ್ಟಿ, ನವೀನ್ ಕೊಳ್ಳೆಬೈಲು, ಕಿರಣ್ ಹೆಗ್ಡೆ, ಅಶ್ವಿನ್ ರೈ, ಬಿಪಿನ್ ಚಂದ್ರಪಾಲ್, ಸೋಮನಾಥ, ಪದ್ಮಪ್ರಸಾದ್, ಅಜಿತ್ ಹೆಗ್ಡೆ, ಶಂಕರ್ ಶೇರಿಗಾರ್, ರಮೇಶ್ ಕಾಂಚನ್, ಪ್ರಸಾದ್ ಕಾಂಚನ್ ಮೊದಲಾದವರಿದ್ದರು ಈ ಸಂದರ್ಭದಲ್ಲಿ ಡಿಕೆಶಿಯವರನ್ನು ಸನ್ಮಾನ ಮಾಡಲಾಯಿತು


