×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಕ್ಷಿಪ್ರ ಸಾಧನ : ಕಲ್ಮಾಡಿಯಲ್ಲಿ ಶಿವಗಾನಾಮೃತ ಭಜನಾ ಕಾರ್ಯಕ್ರಮ ಉದ್ಘಾಟಸಿ ಡಾ. ತಲ್ಲೂರು

ಉಡುಪಿ : ಭಜನೆ ಭಗವಂತನನ್ನು ಒಲಿಸಿಕೊಳ್ಳುವ ಕ್ಷಿಪ್ರ ಸಾಧನವಾಗಿದೆ ಅಲ್ಲದೆ ಅಧ್ಯಾತ್ಮಿಕ ಸಾಧನೆಗೆ ಮೂಲಾಧಾರವಾಗಿದೆ. ಭಜನೆಯಿಂದ ಭಗವಂತನ ಕೃಪೆ ಮಾತ್ರವಲ್ಲದೆ ಇಹಪರ ಸಾಧನೆಗೂ ಪೂರಕ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಸಹಕಾರದಲ್ಲಿ ಮಲ್ಪೆ ಕಲ್ಮಾಡಿಯ ಶ್ರೀ ಭಗವತಿ ಮಾರಿಕಾಂಬಾ ಸನ್ನಿದಿಯ ಆವರಣದಲ್ಲಿ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ‘ಶಿವಗಾನಾಮೃತ’ ಭಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲಿಯುಗದಲ್ಲಿ ಕೇವಲ ಭಗವಂತನನ್ನು ನಾಮಸ್ಮರಣೆಯಿಂದಲೇ ಒಲಿಸಿಕೊಳ್ಳಬಹುದು ಎಂದು ಪುರಾಣಗಳು ಹೇಳುತ್ತವೆ. ಭಗವಂತನ ಭಜನೆ, ನಾಮಸ್ಮರಣೆ ನಡೆಯುತ್ತದೆಯೋ ಅಲ್ಲಿ ಭಗವಂತ ಇದ್ದೇ ಇದ್ದಾನೆ. ದಾನಧರ್ಮಾದಿಗಳು, ಭಜನೆಗಳನ್ನು ನಿರಂತರ ಮಾಡುತ್ತಾ ಹೋದರೆ ಬದುಕಿನಲ್ಲಿ ಬರುವ ಅನಿಷ್ಟಗಳನ್ನು ದೂರಮಾಡಬಹುದು ಎಂಬುದು ಹಿರಿಯರ ಅನುಭವ ಎಂದು ಅವರು ತಿಳಿಸಿದರು.

ಶಿವರಾತ್ರಿ ಜಾಗರಣೆ ಕೂಡಾ ಭಗವಂತನನ್ನು ಒಲಿಸಿಕೊಳ್ಳುವ ಒಂದು ಮಾರ್ಗ. ಇಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಆಡಂಬರಕ್ಕಲ್ಲ. ಭಕ್ತಿಯೇ ಪ್ರಧಾನವಾಗಿದ್ದರೆ ಭಗವಂತ ನಮ್ಮ ಪ್ರಾರ್ಥನೆಯನ್ನು ಖಂಡಿತಾ ಆಲಿಸುತ್ತಾನೆ ಎಂದ ಅವರು, ಇಂದು ಇಂಟರ್‌ನೆಟ್, ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣಗಳ ಮೋಹದಲ್ಲಿ ಕಳೆದು ಹೋಗುತ್ತಿರುವ ಯುವಜನತೆಯನ್ನು ಆಧ್ಯಾತ್ಮದೆಡೆಗೆ ಸೆಳೆಯಲು ಈ ಭಜನೆ ಒಂದು ಪ್ರಮುಖ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಈ ಕಾರ್ಯ ಶ್ಲಾಘನೀಯ ಎಂದರು.

ನಗರಸಭೆಯ ಮಾಜಿ ಸದಸ್ಯ ಸುಂದರ ಕಲ್ಮಾಡಿ ಮಾತನಾಡಿದರು.
ಶ್ರೀ ಭೈರವನಾಥೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ ಕೋಟ್ಯಾನ್ ಸನ್ನಿಧಿಯ ವೈಶಿಷ್ಟ್ಯವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ನಾಗರಾಜ ಸುವರ್ಣ, ಪ್ರಸಾದ್‌ರಾಜ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಕೇಶವ ಎಂ. ಕೋಟ್ಯಾನ್, ಅಭಿನಂದನ್ ಕೋಟ್ಯಾನ್, ಶ್ರೀ ಭಗವತಿ ಮಾರಿಕಾಂಬಾ ಸನ್ನಿಧಿ ಅಧ್ಯಕ್ಷ ಟಿ. ಚಂದ್ರಶೇಖರ್, ಶ್ರೀದೇವಿ ಜ್ಞಾನೋದಯ ಪಾಂಡುರoಗ ಭಜನಾ ಮಂದಿರದ ಅಧ್ಯಕ್ಷ ದಾಮೋದರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ರವೀಂದ್ರ ನಾಡಿಗ್ ಸ್ವಾಗತಿಸಿ, ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *