ಮಂಗಳೂರು (ದಕ್ಷಿಣ ಕನ್ನಡ): ಪ್ರಧಾನಿ ನರೇಂದ್ರ ಮೋದಿ ಎದುರಲ್ಲಿ ಚುನಾವಣೆಗೆ ನಿಲ್ಲುತ್ತಿಲ್ಲ. ಬ್ರಜೇಶ್ ಚೌಟ ಎದುರು ಸ್ಪರ್ಧಿಸುತ್ತಿದ್ದೇನೆ. ಇಲ್ಲಿ ನಾನು ಮೋದಿ ಅವರನ್ನು ಎದುರಿಸುತ್ತಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ತಿಳಿಸಿದ್ದಾರೆ. ಮೋದಿ ಅಲೆ ಬಗ್ಗೆ ಪ್ರಶ್ನೆ ಎದುರಾದಾಗ ಈ ರೀತಿ ಉತ್ತರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಬಳಿಕ ಶುಕ್ರವಾರ ಮಂಗಳೂರಿಗೆ ಆಗಮಿಸಿದ ಅವರು, ಬಡವರ ಏಳಿಗೆಗಾಗಿ ಹಗಲಿರುಳು ದುಡಿಯುವ ಪಕ್ಷ ಕಾಂಗ್ರೆಸ್. ಕಳೆದ ವರ್ಷ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಕಳೆದ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗೆ ವಿಪಕ್ಷಗಳು ಅಪಹಾಸ್ಯ ಮಾಡಿದವು. ಅದನ್ನು ಕಸದಬುಟ್ಟಿಗೆ ಹಾಕಿ ಎಂದರು. ಗ್ಯಾರಂಟಿಯಿಂದ ಇಂದು ಸಿದ್ದರಾಮಯ್ಯ ಸರ್ಕಾರ ಪ್ರತಿ ಮನೆಗೆ 5 ರಿಂದ 7 ಸಾವಿರ ರೂ.ವರೆಗೆ ನೀಡುತ್ತಿದೆ. ಇದರಿಂದ ಕುಟುಂಬದ ಅನ್ಯೋನ್ಯತೆ ಹೆಚ್ಚಿದೆ. ಇದು ಕಾಂಗ್ರೆಸ್ನಿಂದ ಸಾಧ್ಯವಾಗಿದೆ. ಇದನ್ನು ಇಟ್ಟುಕೊಂಡು ಮನೆಮನೆಗೆ ಹೋಗುತ್ತೇವೆ. ನಮ್ಮ ಗ್ಯಾರಂಟಿಯ ಫಲಾನುಭವಿಗಳು ಇದ್ದಾರೆ. ದೇವರು ಮೆಚ್ಚುವ ಕೆಲಸವನ್ನು ಮಾಡಿದ್ದೇವೆ. ಇದನ್ನು ಯಾರೂ ಮರೆಯುವುದಿಲ್ಲ ಎಂದು ತಿಳಿಸಿದರು.

