ಪಡುಬಿದ್ರಿ: ಅವಿಭಜಿತ ದಕ ಜಿಲ್ಲೆಯಲ್ಲಿ ೧೭೦ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಿದ್ದು ಕೇವಲ ೪೦ ಸಂಘಗಳು ನಬಾರ್ಡ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಬಾರ್ಡ್ ಯೋಜನೆಯ ಫಲಾನುಭವಿಗಳಾಗಲು ಇನ್ನೂ ೩ ವರ್ಷ ವಿಸ್ತರಿಸಿದ್ದು, ಉಳಿದ ಎಲ್ಲಾ ಸಹಕಾರಿ ಸಂಘಗಳು ನಬಾರ್ಡ್ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಮ್.ಎನ್. ರಾಜೇಂದ್ರ ಕುಮಾರ್‌ರವರು ಹೇಳಿದರು. ಶನಿವಾರ ಉಚ್ಚಿಲ ಬಡಾ ಗ್ರಾಮದಲ್ಲಿ ಬೆಳಪು ವ್ಯವಸಾಯ ಸಹಕಾರಿ ಸಂಘದ ಅಮೃತ ಮಹೋತ್ಸವ ಸಂಭ್ರಮದಲ್ಲಿ ನಬಾರ್ಡ್ ಯೋಜನೆಯಡಿ ರೂ ೩.೭೦ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಹಕಾರಿ ಮಹಲ್ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಜನರ ವಿಶ್ವಾಸದಿಂದ ಜಿಲ್ಲಾ ಸಹಕಾರಿ ಸಂಘಗಳು ರಾಷ್ಟ್ರ ಮತ್ತು ರಾಜ್ಯದಲ್ಲಿ ಅದ್ಭುತ ಬೆಳವಣಿಗೆ ಸಾಧಿಸಿದೆ. ಮಹಿಳಾ ಸ್ವಾವಲಂಬನೆಗಾಗಿ ನವೋದಯ ಸಂಘಗಳು ಬೃಹತ್ ಶಕ್ತಿಯಾಗಿ ಬೆಳೆದಿದೆ. ಮಹಿಳಾ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ದೇಶದ ಕಟ್ಟಕಡೆಯ ರೈತನನ್ನು ತಲುಪುವ ಏಕೈಕ ಕ್ಷೇತ್ರ ಸಹಕಾರಿ ಕ್ಷೇತ್ರ. ಅಭಿವೃದ್ಧಿಯಲ್ಲಿ ಜಿಲ್ಲೆಯ ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್‌ಗಳನ್ನೂ ಮೀರಿಸಿದ ಸಾಧನೆಗೈದಿದೆ. ಗ್ರಾಮೀಣ ಪ್ರದೇಶದ ಬೆಳಪು ಸಂಘದ ಸಾಧನೆ ಅನುಕರಣೀಯವಾದುದು. ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿ ಸಂಘಕ್ಕೆ ಕೇಂದ್ರ ಸಹಕಾರಿ ಬ್ಯಾಂಕ್ ನಿಧಿಯಿಂದ ರೂ.೧೫ ಲಕ್ಷ ನೀಡಲಾಗುವುದು ಎಂದವರು ಘೋಷಿಸಿದರು. ಸ್ಮರಣ ಸಂಚಿಕೆ ಬಿಡುಗಡೆ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಪು ಸಂಘದ ಸಹಕಾರಿ ಮಹಲ್ ಉದ್ಘಾಟಿಸಿದ ಬಳಿಕ ಸಂಘದ ಸ್ಮರಣ ಸಂಚಿಕೆ ಅಮೃತ ದರ್ಪಣ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭ ಅವರು ನೂತನ ೫ ಸ್ವಸಹಾಯ ಸಂಘಗಳಿಗೆ ಚಾಲನೆ ನೀಡಿದರು. ಸಹಕಾರಿ ಸಭಾಂಗಣ ಉದ್ಘಾಟನೆ: ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ.ರಮೇಶ್ ಸಂಘದ ಸಹಕಾರಿ ಸಭಾಂಗಣ ಉದ್ಘಾಟಿಸಿದರು. ಬಳಿಕ ಠೇವಣಾತಿ ಪತ್ರ, ಸಾಲ ಪತ್ರ, ಉಳಿತಾಯ ಖಾತೆ, ಪಾಸ್ ಪುಸ್ತಕ ವಿತರಿಸಿ, ನಬಾರ್ಡ್ ಯೋಜನಗೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕ ವಿತರಣೆ; ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಬೆಳಪು ಸಂಘದ ವತಿಯಿಂದ ಬಡಾ ಗ್ರಾಪಂಗೆ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಸೇಫ್ ಲಾಕರ್ ಕೀ ಮತ್ತು ಠಢೇವಣಾತಿದಾರರ ಠೇವಣಾತಿ ಅದೃಷ್ಟ ಡ್ರಾವನ್ನು ಡಾ. ಎಮ್.ಎನ್.ಆರ್ ನಡೆಸಿದರು. ಸಮೃದ್ಧಿ ಸಭಾಂಗಣ ಉದ್ಘಾಟನೆ: ಸಂಘದ ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಗೋದಾಮು ಮತ್ತು ಪಡಿತರ ವಿತರಣಾ ವಿಭಾಗಗಳನ್ನು ನಬಾರ್ಡ್ ಪ್ರಬಂಧಕಿ ಸಂಗೀತಾ ಎಸ್. ಕರ್ತ ಉದ್ಘಾಟಿಸಿದರು. ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೪೮ರಲ್ಲಿ ಸ್ಥಾಪಿತವಾದ ಬೆಳಪು, ಎಲ್ಲೂರು ಮತ್ತು ಬಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ಗ್ರಾಮದ ಹತ್ತು ಮಂದಿ ಹಿರಿಯರು ಒಗ್ಗೂಡಿ ಪಣಿಯೂರಿನಲ್ಲಿ ಸಣ್ಣ ಕಟ್ಟಡದೊಂದಿಗೆ ಪ್ರಾರಂಭಿಸಲಾಗಿತ್ತು. ೪೩೫೦ ಸದಸ್ಯ ಬಲದೊಂದಿಗೆ ೬೦ ಕೋಟಿ ರೂಪಾಯಿ ಠೇವಣಾತಿಯನ್ನು ಹೊಂದಿದೆ. ಸತತ ೨೫ ವರ್ಷಗಳಿಂದ ಎ ಶ್ರೇಣಿಯ ಬ್ಯಾಂಕಿಂಗ್ ಎಂಬ ಮಾನ್ಯತೆ ಹೊಂದಿದೆ ಎಂದರು. ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್.ರಮೇಶ್, ದಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ ಕುಕ್ಕೆಹಳ್ಳಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮೆಂಡನ್, ಬೆಳಪು ವ್ಯವಸಾಯ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಮಾರಿ ಸುಲೋಚನಾ, ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ ಎಸ್. ಆಚಾರ್ಯ, ಶೋಭಾ ಬಿ. ಭಟ್, ಮೀನಾ ಪೂಜಾರ್ತಿ, ವಿಮಲಾ ಅಂಚನ್, ಅನಿತಾ ಆನಂದ, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುನ್ನ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್‌ವರೆಗೆ ವಿವಿಧ ಬಿರುದಾವಳಿಗಳೊಂದಿಗೆ ಸಹಕಾರಿ ಮೆರವಣಿಗೆ ನಡೆಯಿತು. ಡಾ. ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಸಂಘ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾವಿಸಿದರು. ಸುಲೋಚನಾ ದೇವಾಡಿಗ ವಂದಿಸಿದರು.

