
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ಮಣಿಪಾಲ ಎಂ ಐ ಟಿ ವಿದ್ಯಾರ್ಥಿಯೊಬ್ಬರು ಅಂಗಾಂಗಳ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. 19 ವರ್ಷದ ಎಂ ಐ ಟಿ ವಿದ್ಯಾರ್ಥಿ ಶ್ರೀ ವೆಮುಲಾ ಸುದರ್ಶನ್ ಚೌಧರಿ (ಆಂಧ್ರಪ್ರದೇಶ) ಇವರಿಗೆ ಮಣಿಪಾಲ – ಉಡುಪಿ ರಸ್ತೆಯಲ್ಲಿ 9. 10. 2022ರಂದು ರಾತ್ರಿ ಗಂಟೆ 8. 40 ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು . ಗುರುಜಾಲ ಮಂಡಾಲ್, ಆಂಧ್ರಪ್ರದೇಶ ಇಲ್ಲಿನ ಶ್ರೀ ವೆಮುಲ ಅಲೇಖಾ ಪ್ರಸಾದ್ ಇವರ ಮಗನಾದ ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರು ಅಪಘಾತದ ಪರಿಣಾಮದಿಂದ ತೀವ್ರವಾಗಿ ಗಾಯಗೊಂಡಿದ್ದರು. ವೈದ್ಯರು ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ . ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರ ತಂದೆ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನುವ್ಯಕ್ತಪಡಿಸಿದರು. ತರುವಾಯ ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಶ್ರೀ ವೆಮುಲಾ ಸುದರ್ಶನ್ ಚೌಧರಿ ಅವರನ್ನು 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. ನೋಂದಾಯಿತ ರೋಗಿಗಳಿಗೆ, ಯಕೃತ್ತು ಕೆ ಎಂ ಸಿ ಆಸ್ಪತ್ರೆ ಅಂಬೇಡ್ಕರ್ ಸರ್ಕಲ್ ಮಂಗಳೂರಿಗೆ, ಶ್ವಾಸಕೋಶ ಆಸ್ಟರ್ ಆಸ್ಪತ್ರೆ ಬೆಂಗಳೂರಿಗೆ , ಒಂದು ಮೂತ್ರಪಿಂಡ ಎ ಜೆ ಆಸ್ಪತ್ರೆ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳು, ಒಂದು ಮೂತ್ರಪಿಂಡ ಮತ್ತು ಚರ್ಮ ವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರೋಗಿಗಳಿಗೆ ಬಳಸಲಾಯಿತು.

