×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಉದ್ಯಾವರದಲ್ಲಿ ಕೆ.ಕೆ. ಲಿವಿಂಗ್ ಫರ್ನಿಚರ್ ಮಳಿಗೆ ಶುಭಾರಂಭ: ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತನೆಗಳು ಬದುಕಿಗೆ ದಾರಿದೀಪ: ಶ್ರೀ ವಿದ್ಯಾಸಾಗರ ತೀರ್ಥರು

ಉದ್ಯಾವರ: ಅ. 13: ಭಾರತೀಯ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಮಾನವನ ಬದುಕಿಗೆ ಮಹತ್ವದ ಮಾರ್ಗದರ್ಶನ ನೀಡುತ್ತವೆ. ದೇವರ ಆರಾಧನೆ ಮತ್ತು ಧ್ಯಾನದ ಮೂಲಕ ಮನಸ್ಸಿನ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು ಜೀವನದಲ್ಲಿ ನೆಮ್ಮದಿ ಹಾಗೂ ಜ್ಞಾನ ಸಂಪಾದನೆಗೆ ಪೂರಕವಾಗಿದೆ ಎಂದು ಶ್ರೀ ಕೃಷ್ಣಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಹೇಳಿದರು.

ಉದ್ಯಾವರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಅ. 12ರಂದು ಸೋಮವಾರ ನೂತನವಾಗಿ ಆರಂಭಗೊಂಡ ಕೆ.ಕೆ. ಲಿವಿಂಗ್ ಫರ್ನಿಚರ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ದೇವರ ಆರಾಧನೆ ಮತ್ತು ಧ್ಯಾನದಲ್ಲಿ ದೇಹದ ಸ್ಥಿರತೆ ಹಾಗೂ ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ. ಇವೆರಡರ ಸಮನ್ವಯವಿಲ್ಲದೆ ಜ್ಞಾನ ಸಂಪಾದನೆ ಕಷ್ಟಸಾಧ್ಯ. ಹೀಗಾಗಿ ಧ್ಯಾನ ಮತ್ತು ಆಧ್ಯಾತ್ಮಿಕ ಸಾಧನೆಗೆ ಅನುಕೂಲಕರವಾದ ವಾತಾವರಣ ಹಾಗೂ ಸೂಕ್ತ ಆಸನಗಳ ಆಯ್ಕೆಯೂ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಭಾರತೀಯ ಪರಂಪರೆಯಲ್ಲಿ ಪೀಠ, ಕಲಶ, ಶಂಖಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳಿವೆ. ಇವು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಭಕ್ತಿ, ಶ್ರದ್ಧೆ ಮತ್ತು ಏಕಾಗ್ರತೆಯನ್ನು ಬೆಳೆಸುವ ಸಾಧನಗಳಾಗಿವೆ. ದೇವರು ಸರ್ವವ್ಯಾಪಿಯಾಗಿದ್ದು, ಬ್ರಹ್ಮಾಂಡದಲ್ಲಿರುವ ದೈವಿಕ ಶಕ್ತಿಯೇ ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದೆ ಎಂಬ ಭಾವನೆಯೊಂದಿಗೆ ಆರಾಧನೆ ಮಾಡಬೇಕು ಎಂದು ಹೇಳಿದರು.

ಧ್ಯಾನಕ್ಕೆ ಅನುಕೂಲವಾಗುವ ಆಸನಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೂ ಪೂರಕವಾಗಿವೆ. ಪ್ರತಿಯೊಬ್ಬರೂ ತಮ್ಮ ದೇಹಕ್ಕೆ ಅನುಕೂಲಕರವಾದ ಆಸನಗಳನ್ನು ಆಯ್ಕೆ ಮಾಡಿಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಪೂರಕವಾದ ಧಾರ್ಮಿಕ ಆಚರಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಕ್ತಿ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.

ಗುಣಮಟ್ಟದ ಗೃಹೋಪಯೋಗಿ ವಸ್ತುಗಳ ಮಳಿಗೆಯಾಗಿ ಕೆ.ಕೆ. ಲಿವಿಂಗ್ ಗುರುತಿಸಿಕೊಳ್ಳಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಆಕರ್ಷಕ ಹಾಗೂ ವೈವಿಧ್ಯಮಯ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಕೆ.ಕೆ. ಲಿವಿಂಗ್ ವಿಶಿಷ್ಟ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.

ಮಳಿಗೆಯ ಶುಭಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ವ್ಯಾಪಾರ ಕ್ಷೇತ್ರದಲ್ಲಿ ಗುಣಮಟ್ಟ, ಗ್ರಾಹಕಸೇವೆ, ವೈವಿಧ್ಯಮಯ ಉತ್ಪನ್ನಗಳು ಹಾಗೂ ವಿಶ್ವಾಸಾರ್ಹತೆ ಅತ್ಯಂತ ಮುಖ್ಯವಾಗಿವೆ. ಆನ್‌ಲೈನ್ ವ್ಯಾಪಾರ ವೇಗವಾಗಿ ಬೆಳೆಯುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಒದಗಿಸುವುದು ಅಗತ್ಯ ಎಂದರು.

ಉದ್ಯಾವರದಲ್ಲಿ ಆರಂಭಗೊಂಡಿರುವ ಕೆ.ಕೆ. ಲಿವಿಂಗ್ ಮಳಿಗೆಯು ಉದ್ಯಾವರ ಮಾತ್ರವಲ್ಲದೆ ಉಡುಪಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರಿಗೂ ಅನುಕೂಲವಾಗಲಿದೆ. ಒಂದೇ ಸೂರಿನಡಿ ವಿವಿಧ ವಿನ್ಯಾಸಗಳ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇದರಿಂದ ಅವಕಾಶ ದೊರೆಯಲಿದೆ ಎಂದು ಹೇಳಿದರು.

ಮಳಿಗೆಯ ಮಾಲೀಕ ಪ್ರಕಾಶ್ ಕೋಟ್ಯಾನ್ ಹಾಗೂ ಅವರ ಕುಟುಂಬದ ಪರಿಶ್ರಮ, ಪ್ರಾಮಾಣಿಕತೆ, ಶ್ರದ್ಧೆ ಮತ್ತು ವ್ಯಾಪಾರದ ಬಗೆಗಿನ ಬದ್ಧತೆ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಲಿದೆ. ಮುಂದಿನ ದಿನಗಳಲ್ಲಿ ಉಡುಪಿ, ಕುಂದಾಪುರ, ಬೈಂದೂರು ಸೇರಿದಂತೆ ಕರಾವಳಿಯ ವಿವಿಧ ಪ್ರದೇಶಗಳಿಗೆ ಸಂಸ್ಥೆ ತನ್ನ ವ್ಯಾಪಾರವನ್ನು ವಿಸ್ತರಿಸಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಉಡುಪಿ ಜಿಲ್ಲೆಯ ವಾಣಿಜ್ಯ ಕ್ಷೇತ್ರಕ್ಕೆ ಉದ್ಯಾವರದಲ್ಲಿ ಇಂತಹ ಸುಸಜ್ಜಿತ ಸಂಸ್ಥೆಯ ಆರಂಭ ಹೊಸ ಕೊಡುಗೆಯಾಗಿದೆ. ಇಂತಹ ಉದ್ಯಮಗಳು ಬೆಳೆಯುವುದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರೊಂದಿಗೆ ಗ್ರಾಹಕರಿಗೂ ಅನುಕೂಲವಾಗಲಿದೆ ಎಂದರು.

ಉಜ್ವಲ್ ಡೆವಲಪರ್ಸ್ ಮಾಲೀಕ ಪುರುಷೋತ್ತಮ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ ಇಂದ್ರಾಳಿ, ಪ್ರಭಾಕರ್ ಎಸ್. ಪೂಜಾರಿ, ಶ್ರೀ ಭಗವಾನ್ ದಾಸ್, ರಾಜೀವ್ ಕೋಟ್ಯಾನ್, ಮೊಹಮ್ಮದ್ ಆಜ್ಪಾಕ್, ನವೀನ್ ಚಂದ್ರ, ಪಾಂಡುರಂಗ ಆಚಾರ್ಯ, ದೇವಿ ಪ್ರಸಾದ್ ಶೆಟ್ಟಿ, ಅಶೋಕ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಂಸ್ಥೆಯ ಪಾಲುದಾರರಾದ ಪ್ರಕಾಶ್ ಟಿ. ಕೋಟ್ಯಾನ್, ಲೀಲಾವತಿ ಕೋಟ್ಯಾನ್, ಪ್ರತೀಕ್ ಕೋಟ್ಯಾನ್ ಹಾಗೂ ಕಾರ್ತಿಕ್ ಕೋಟ್ಯಾನ್ ಅವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ತೇಜಸ್ ಬಂಗೇರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *