×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬನ್ನಂಜೆಯಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ಸಾಂಸ್ಕೃತಿಕ ಹಬ್ಬ ‘ಮಹಿಷ ಮಹೋತ್ಸವ’ ಆಚರಣೆ

ಉಡುಪಿ: ಮೂಲನಿವಾಸಿಗಳ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ಅರಿವು ಮೂಡಿಸಿಕೊಂಡು ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಅಧಿಕಾರ ಮತ್ತು ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಇತಿಹಾಸದ ಅರಿವಿಲ್ಲದ ಸಮುದಾಯಗಳು ತಮ್ಮ ಹಕ್ಕುಗಳಿಂದ ವಂಚಿತರಾಗುವ ಅಪಾಯವಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಉಡುಪಿಯ ಬನ್ನಂಜೆ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ ಮಹಿಷ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಸುರರು ಎಂದರೆ ದೈತ್ಯರು ಎಂಬ ಅರ್ಥದಲ್ಲಿ ಮಾತ್ರವಲ್ಲದೆ, ದಾನಶೀಲರು ಮತ್ತು ರಕ್ಷಕರಾಗಿಯೂ ಪರಿಗಣಿಸಬೇಕಾದವರು. ದೇಶ, ಪ್ರಕೃತಿ ಮತ್ತು ಜನರನ್ನು ರಕ್ಷಿಸಿದ ಮಹಿಷಾಸುರ ಸೇರಿದಂತೆ ಹಲವು ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಚಿತ್ರಿಸುವ ಮೂಲಕ ಇತಿಹಾಸವನ್ನು ತಿರುಚಲಾಗಿದೆ ಎಂಬುದು ತಮ್ಮ ನಿಲುವು ಎಂದು ಸ್ವಾಮೀಜಿ ಹೇಳಿದರು.

ಭಾರತದ ಇತಿಹಾಸವನ್ನು ಬ್ರಾಹ್ಮಣ್ಯ ಮತ್ತು ಬೌದ್ಧ, ದ್ರಾವಿಡ ಮತ್ತು ಆರ್ಯ, ವೈದಿಕ ಮತ್ತು ಅವೈದಿಕ ಪರಂಪರೆಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಬೇಕಿದೆ. ಮಹಿಷಾಸುರ ಆದಿವಾಸಿಗಳ ನಾಯಕನಾಗಿದ್ದರು ಎಂಬ ನಂಬಿಕೆಯೊಂದಿಗೆ ಮೂಲನಿವಾಸಿಗಳು ತಮ್ಮ ಚರಿತ್ರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

“ನಮ್ಮಲ್ಲಿ ಇತಿಹಾಸದ ಬಗ್ಗೆ ಜಾಗೃತಿ ಮೂಡಿ ಎಚ್ಚೆತ್ತುಕೊಂಡರೆ ಮಾತ್ರ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ. ಆದರೆ ನಮ್ಮನ್ನು ಜಾಗೃತರಾಗಲು ಬಿಡದ ವಾತಾವರಣವಿದೆ. ಬಾಯಲ್ಲಿ ಭೀಮವಾದ ಹೇಳುತ್ತಾ, ಮನೆಗಳಲ್ಲಿ ಮನುವಾದ ಆಚರಿಸಿದರೆ ಅಂಬೇಡ್ಕರ್ ಮತ್ತು ಬುದ್ಧರ ವಿಚಾರಗಳನ್ನು ಹೇಗೆ ಜೀವಂತವಾಗಿಡಲು ಸಾಧ್ಯ?” ಎಂದು ಪ್ರಶ್ನಿಸಿದರು.

ಮಹಿಷಾಸುರ, ರಾವಣಾಸುರ, ರಂಬಾಸುರ, ಮೂಕಾಸುರ, ಬಕಾಸುರ, ಹಿಂಡಬಸುರ ಹಾಗೂ ಬಲಿಚಕ್ರವರ್ತಿಯಂತಹ ವ್ಯಕ್ತಿತ್ವಗಳನ್ನು ತಮ್ಮ ಸಾಂಸ್ಕೃತಿಕ ಪರಂಪರೆಯ ನಾಯಕರಾಗಿ ನೋಡುವ ಸಮುದಾಯಗಳು, ಅವರ ಸ್ಮರಣೆಗೆ ಮಹತ್ವ ನೀಡಬೇಕು. ತಮ್ಮ ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಬಿಂಬಿಸುವ ಚಿತ್ರಣವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಅಂಬೇಡ್ಕರ್ ಸಂವಿಧಾನ ಸಮಾನ ಅವಕಾಶದ ಭರವಸೆ

ಪರಂಪರೆ, ಚರಿತ್ರೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಮುದಾಯಗಳು ಅಧಿಕಾರ ಹಾಗೂ ಹಕ್ಕುಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ದೇಶದ ನಿರ್ಮಾಣದಲ್ಲಿ ಮೂಲನಿವಾಸಿಗಳ ಕೊಡುಗೆಯನ್ನು ಗುರುತಿಸುವುದರ ಜೊತೆಗೆ ಅವರ ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ನಡೆಯಬೇಕು ಎಂದು ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮನುಸ್ಮೃತಿಯ ಸಾಮಾಜಿಕ ವ್ಯವಸ್ಥೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳನ್ನು ಹೋಲಿಸಿದ ಅವರು, “ಕಸ ಗುಡಿಸುವವರ ಮಗಳು ಕಸ ಗುಡಿಸಬೇಕು ಎಂಬ ಮನುವಾದಿ ಚಿಂತನೆಗೆ ವಿರುದ್ಧವಾಗಿ, ಕಸ ಗುಡಿಸುವವರ ಮಗಳು ಜಿಲ್ಲಾಧಿಕಾರಿಯಾಗಬಹುದು ಎಂಬ ಸಮಾನ ಅವಕಾಶವನ್ನು ಅಂಬೇಡ್ಕರ್ ಸಂವಿಧಾನ ಒದಗಿಸುತ್ತದೆ. ಆದ್ದರಿಂದ ಸಂವಿಧಾನದ ಆಶಯಗಳನ್ನು ಉಳಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು” ಎಂದರು.

ಮತದಾನದ ಹಕ್ಕು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ: ಆರೋಪ

ಮೂಲ ನಿವಾಸಿಗಳನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಮೂಲೆಗುಂಪು ಮಾಡಿ, ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.

ಈ ದೇಶದ ಬಹುಜನರು ಆಳುವವರಾಗಬೇಕೇ ಹೊರತು ಗುಲಾಮರಾಗಬಾರದು. ಸ್ವಾಭಿಮಾನ ಮತ್ತು ಘನತೆ ಆಳುವ ಸಮುದಾಯದ ಲಕ್ಷಣಗಳಾಗಿವೆ. ಮೂಲನಿವಾಸಿಗಳನ್ನು ಅನಾಥರನ್ನಾಗಿಸಿ, ಅವರ ಮತದಾನದ ಹಕ್ಕನ್ನು ಕಿತ್ತುಕೊಂಡು ದೇಶದ್ರೋಹಿಗಳಂತೆ ಬಿಂಬಿಸುವ ಸಂಚು ನಡೆಯುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಚರಿತ್ರೆಯಲ್ಲಿ ಮೂಲನಿವಾಸಿಗಳನ್ನು ಊರಿನಿಂದ ಹೊರಗಿಡಲಾಗುತ್ತಿತ್ತು; ಇಂದು ಅವರನ್ನು ಹಕ್ಕು ಮತ್ತು ಅಧಿಕಾರಗಳಿಂದ ದೂರವಿಡಲಾಗುತ್ತಿದೆ ಎಂದು ಅವರು ಹೇಳಿದರು. ದೇಶದ ಸಂಪತ್ತು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಗಂಭೀರ ಚರ್ಚೆ ನಡೆಯಬೇಕಾದ ಸಂದರ್ಭದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಟೀಕೆಯನ್ನೂ ಮಾಡಿದರು.

ಮಹಿಷ ಮಂಡಲದ ಒಡೆಯನಾಗಿದ್ದ ಮಹಿಷನ ಸ್ಮರಣೆ ಮಾಡುವುದು ತಮ್ಮ ದೃಷ್ಟಿಯಲ್ಲಿ ನೈಜ ಇತಿಹಾಸದ ಅರಿವಿನ ಭಾಗವಾಗಿದೆ. ಅಸುರ ಪರಂಪರೆಯನ್ನು ಸ್ಮರಿಸುವುದು ಸಮುದಾಯದ ಜವಾಬ್ದಾರಿಯಾಗಿದ್ದು, ಇದು ಯಾವುದೇ ಸರ್ಕಾರ ಅಥವಾ ಧರ್ಮಕ್ಕೆ ಪರ್ಯಾಯವಾದ ಆಚರಣೆಯಲ್ಲ. ಪ್ರತಿಯೊಂದು ಸಮುದಾಯಕ್ಕೂ ತನ್ನ ಸಂಸ್ಕೃತಿ ಮತ್ತು ನಾಯಕರ ಹಬ್ಬವನ್ನು ಆಚರಿಸುವ ಹಕ್ಕಿದೆ. ಆದರೆ ತಮ್ಮ ಸಾಂಸ್ಕೃತಿಕ ನಾಯಕರನ್ನು ರಾಕ್ಷಸರಂತೆ ಚಿತ್ರಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಮಹಿಷ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಹಾಗೂ ಉಡುಪಿ ಜಿಲ್ಲಾ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ನಿರ್ದೇಶಕ ಯು. ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು.

ಶೈಕ್ಷಣಿಕ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದು ಪಿಎಚ್‌ಡಿ ಪದವಿ ಪಡೆದ ಡಾ. ಆಶಾ ಅವರಿಗೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಮತ್ತು ಬಹುಜನ ಚಿಂತಕ ನಾರಾಯಣ ಮಣೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮದ್ದೂರು ಹಾಗೂ ಅಂಬೇಡ್ಕರ್ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ದಯಾಕರ ಮಲ್ಪೆ ಸ್ವಾಗತಿಸಿದರು. ಲಕ್ಷ್ಮೀನಗರದ ರವಿರಾಜ್ ವಂದಿಸಿದರು. ರಾಘು ಶಿರೂರು ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಕಲಾವಿದ ಶಂಕರದಾಸ್ ಚೇಂಡ್ಕಳ ತಂಡದವರಿಂದ ಕ್ರಾಂತಿಗೀತೆಗಳ ಗಾಯನ ನಡೆಯಿತು. ಕ್ರಾಂತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಳಿಕ ಜ್ಞಾನಪ್ರಕಾಶ ಸ್ವಾಮೀಜಿ ಮಹೋತ್ಸವವನ್ನು ಉದ್ಘಾಟಿಸಿ, ಮೂಲನಿವಾಸಿಗಳ ಇತಿಹಾಸ, ಸಾಂಸ್ಕೃತಿಕ ಗುರುತು, ಸಾಮಾಜಿಕ ನ್ಯಾಯ, ಸ್ವಾಭಿಮಾನ ಮತ್ತು ಸಂವಿಧಾನದ ಆಶಯಗಳ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.

ಮಹಿಷ ಮಹೋತ್ಸವವು ಮೂಲನಿವಾಸಿಗಳ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸುವುದು, ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು ಮತ್ತು ಸಾಮಾಜಿಕ ಸಮಾನತೆಯ ಕುರಿತು ಚರ್ಚೆ ನಡೆಸುವ ವೇದಿಕೆಯಾಗಿ ನಡೆಯಿತು.

Leave a Reply

Your email address will not be published. Required fields are marked *