ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗಿದ್ದ ಚೆಸ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮವು ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಈ ಚೆಸ್ ಪಂದ್ಯಾಟವು 1ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದಿದ್ದು, ಜಿಲ್ಲೆಯ ಕಾರ್ಕಳ, ಕಾಪು, ಉಡುಪಿ, ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಲಾಯಿತು.
ಸೆಪ್ಟೆಂಬರ್ 6ರಂದು ಕಾರ್ಕಳದ ಶ್ರೀಮೂಡು ಮಹಾಗಣಪತಿ ಕಲಾ ಮಂದಿರದಲ್ಲಿ ಉದ್ಘಾಟನೆಗೊಂಡ ಚೆಸ್ ಪಂದ್ಯಾಟ, ಸೆಪ್ಟೆಂಬರ್ 13ರಂದು ಕಾಪುವಿನ ಹಳೆ ಮಾರಿಗುಡಿ ಸಭಾಂಗಣ, ಸೆಪ್ಟೆಂಬರ್ 20ರಂದು ಉಡುಪಿಯ ಬೋರ್ಡ್ ಹೈಸ್ಕೂಲ್ ಸಭಾಂಗಣ, ಸೆಪ್ಟೆಂಬರ್ 27ರಂದು ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪ ಹಾಗೂ ಅಕ್ಟೋಬರ್ 4ರಂದು ತ್ರಾಸಿಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ಚೆಸ್ ಪಂದ್ಯಾಟಗಳು ನಡೆದವು.

ಬೈಂದೂರು ವಿಧಾನಸಭಾ ಕ್ಷೇತ್ರದ ಚೆಸ್ ಪಂದ್ಯಾಟವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಚೆಸ್ ಪಂದ್ಯಾಟದ ಸಮಾರೋಪಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಚೆಸ್ ಆಟವು ಮಕ್ಕಳಲ್ಲಿ ಜಾಣ್ಮೆ, ಸೃಜನಶೀಲತೆ ಮತ್ತು ಮುನ್ನೋಟದ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಇನ್ನೋರ್ಚ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಚೆಸ್ ಉತ್ತಮ ವೇದಿಕೆಯಾಗಿದೆ. ಚೆಸ್ ಆಡುವುದರಿಂದ ಮಕ್ಕಳಲ್ಲಿ ಯೋಚಿಸುವ ಹಾಗೂ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗಂಗೊಳ್ಳಿ ಚರ್ಚಿನ ಧರ್ಮಗುರುಗಳಾದ ಫಾದರ್ ರೋಷನ್ ಸಭೆಯನ್ನುದ್ದೇಶಿಸಿ ಮಾತನಶಾಡಿದರು. ಚೆಸ್ ಮಾಸ್ಟರ್ ಹಾಗೂ ಚೀಫ್ ಆರ್ಬಿಟರ್ ಕಾರ್ತಿಕ್ ಶೆಟ್ಟಿ ಸೇರಿದಂತೆ ಚೆಸ್ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು. ಆಯೋಜಕರು ಹಾಗೂ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ರುಡಾಲ್ಫ್ ಡಿಸೋಜಾ ಮಾಧ್ಯಮದವರ ಜೊತೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಚೆಸ್ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವುದು, ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಜಿಲ್ಲೆಯಲ್ಲಿ ಚೆಸ್ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಈ ಪಂದ್ಯಾಟವನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಭವಿಷ್ಯದಲ್ಲಿಯೂ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು. ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಚೆಸ್ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ವಿವಿಧ ಹಂತಗಳಲ್ಲಿ ನಡೆದ ಪಂದ್ಯಗಳಲ್ಲಿ ವಿದ್ಯಾರ್ಥಿಗಳು ಚೆಸ್‌ನ ತಂತ್ರಗಾರಿಕೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಪೋಷಕರು, ಚೆಸ್ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯೊಂದಿಗೆ ಚೆಸ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

