ಬ್ರಹ್ಮಾವರ, ಜು. 15: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಮಸಾಲ, ಹಪ್ಪಳ, ಉಪ್ಪಿನಕಾಯಿ ಹಾಗೂ ಫಾಸ್ಟ್ ಫುಡ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ. ಮಂಜುನಾಥ್ ನಾಯಕ್, ಮಾಲಕರು, ಚಂದು ಮಸಾಲ, ಕೋಟೇಶ್ವರ ಹಾಗೂ ನಿರ್ದೇಶಕರು, ಬೇಕರಿ ಮತ್ತು ಆಹಾರ ಉದ್ಯಮ ಅಸೋಸಿಯೇಷನ್, ಉಡುಪಿ, ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.
ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಗುಣಮಟ್ಟ ಹಾಗೂ ನಿರಂತರ ಪ್ರಯತ್ನ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ತಮ್ಮ ಸ್ವಂತ ಉದ್ಯಮದ ಅನುಭವವನ್ನು ಹಂಚಿಕೊಂಡ ಅವರು, ಮಸಾಲಾ ಪೌಡರ್ ತಯಾರಿಕೆಯ ಕುರಿತು ಯಾವುದೇ ಪೂರ್ವಜ್ಞಾನವಿಲ್ಲದಿದ್ದರೂ, ಆಸಕ್ತಿ ಮತ್ತು ಪರಿಶ್ರಮದಿಂದ ಕಲಿತು ಇಂದು ತಮ್ಮದೇ ಆದ ಬ್ರಾಂಡ್ ಹೊಂದಿರುವುದಾಗಿ ತಿಳಿಸಿದರು.
ಆಹಾರ ಉದ್ಯಮದಲ್ಲಿ ತ್ವರಿತ ಯಶಸ್ಸಿಗಾಗಿ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬಾರದು. ಗ್ರಾಹಕರಿಗೆ ಸದಾ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಹೊಸದಾಗಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮೊದಲು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ನೀಡಿ, ಅವರ ಅಭಿಪ್ರಾಯ ಮತ್ತು ತೃಪ್ತಿಯನ್ನು ತಿಳಿದುಕೊಂಡ ನಂತರ ಮಾರುಕಟ್ಟೆಗೆ ಪರಿಚಯಿಸುವುದು ಉತ್ತಮ ಎಂದು ಸಲಹೆ ನೀಡಿದರು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದರು.
ಉದ್ಯಮದಲ್ಲಿ ಏಳು-ಬೀಳುಗಳು ಸಹಜ. ಅವುಗಳಿಂದ ಹಿಂಜರಿಯದೆ ನಿರಂತರವಾಗಿ ಪ್ರಯತ್ನಿಸುತ್ತಾ ಮುನ್ನಡೆಯಬೇಕು. “ಪ್ರಯತ್ನವೇ ಯಶಸ್ಸಿನ ಕೀಲಿ ಕೈ” ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ . ಮಾತನಾಡಿ, ಉದ್ಯಮದಲ್ಲಿ 12 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಉದ್ಯಮಿಗಳಿಂದ ಪಡೆದ ಮಾಹಿತಿಯು ನಮಗೆ ನೈಜ ಅನುಭವವನ್ನು ನೀಡಿದಂತಾಗಿದೆ. ಇಂತಹ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಮುಂದಿನ ಹೆಜ್ಜೆಗಳನ್ನು ಜಾಗರೂಕತೆಯಿಂದ ಇಡಬೇಕು ಎಂದು ಹೇಳಿದರು. ತರಬೇತಿಯ ಸಂದರ್ಭದಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಇತರರೊಂದಿಗೆ ಹಂಚಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಸಂತೋಷ್ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ಶ್ರೀ ರವಿ ವಂದಿಸಿದರು.

