ಕುಂದಾಪುರ: ಲೋಕಸಭಾ ಚುನಾವಣೆ ಹಾಗೂ ಇತ್ತೀಚಿನ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸಾಧಿಸಿದ ಗೆಲುವು ಕಾರ್ಯಕರ್ತರಲ್ಲಿ ಹೊಸ ಚೇತನ ಮತ್ತು ಚೈತನ್ಯವನ್ನು ತಂದುಕೊಟ್ಟಿದೆ. ಅದೇ ನೆಲೆಗಟ್ಟಿನಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಗೆಲುವಿನ ಸುವರ್ಣ ಯುಗ ಹಾಗೂ ವಿಜಯಯಾತ್ರೆ ಆರಂಭವಾಗಬೇಕು ಎಂದು ಮಾಜಿ ಸಚಿವರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಅವರು ಕರೆ ನೀಡಿದರು
ಜುಲೈ 16ರ ಗುರುವಾರ ಬೆಳಿಗ್ಗೆ ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಶ್ರೀ ಕೆ. ಸದಾನಂದ ಶೆಟ್ಟಿ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ
ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಸುಸೂತ್ರವಾಗಿ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ನಮಗೆ ಆದರ್ಶಪ್ರಾಯ. ಕೇವಲ ನಾಯಕರೇ ಬಂದು ಎಲ್ಲವನ್ನೂ ಮಾಡುತ್ತಾರೆ ಎಂದು ಕಾರ್ಯಕರ್ತರು ಸುಮ್ಮನೆ ಕೂರಬಾರದು ಎಂದರು. ಇದೇ ವೇಳೆ ಅವರು ಸಂಘಟನೆಗೆ ಮೂರು ಪ್ರಮುಖ ಸಲಹೆ ನೀಡಿದರು:
ಸಣ್ಣಪುಟ್ಟ ಗೊಂದಲಗಳಿಗೆ ಪ್ರತಿಯೊಬ್ಬರೂ ಪತ್ರ ಹಿಡಿದು ಹೈಕಮಾಂಡ್ ಅಥವಾ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ. ಜಿಲ್ಲೆಯ ಸಮಸ್ಯೆಗಳನ್ನು ನಾವೇ ಒಟ್ಟಾಗಿ ಕುಳಿತು ಬಗೆಹರಿಸಿಕೊಳ್ಳಬೇಕು. ಪಂಚಾಯತ್ ಮಟ್ಟದಲ್ಲಿ ಮಾಜಿ ಅಧ್ಯಕ್ಷರಾಗಿದ್ದವರನ್ನು ಹಾಗೂ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋದರೆ ಗೊಂದಲಗಳು ಸೃಷ್ಟಿಯಾಗುವುದಿಲ್ಲ.
ನಮ್ಮ ವಿರೋಧಿಗಳು ಕಾಂಗ್ರೆಸ್ ಬೆಂಬಲಿಗರ ವೋಟ್‌ಗಳನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ರ ನಡೆಸುತ್ತಿದ್ದಾರೆ. ಬೂತ್ ಮಟ್ಟದ ಪದಾಧಿಕಾರಿಗಳು ಮತದಾರರ ಪಟ್ಟಿಯ ಕಡೆಗೆ ತೀವ್ರ ನಿಗಾ ಇಡಬೇಕು ಎಂದು ಹೇಳಿದರು.
ದೇಶದ ಇತಿಹಾಸದ ಬಗ್ಗೆ ಅರಿವು ಕಡಿಮೆ ಇದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ 500ಕ್ಕೂ ಹೆಚ್ಚು ಸಂಸ್ಥಾನಗಳನ್ನು ಒಗ್ಗೂಡಿಸಿದ್ದು, ದೇಶಕ್ಕೆ ಐಐಟಿಗಳನ್ನು ನೀಡಿದ್ದು ಹಾಗೂ ರಾಜೀವ್ ಗಾಂಧಿಯವರ ಅವಧಿಯಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು ಇದೇ ಕಾಂಗ್ರೆಸ್. ಭೂಸುಧಾರಣೆ ತಂದು ಬಡವನಿಗೆ ಭೂಮಿ ಕೊಟ್ಟ ಇತಿಹಾಸವನ್ನು ನಾವು ಮನೆಮನೆಗೆ ತಲುಪಿಸಬೇಕು ಎಂದು ಜಯಪ್ರಕಾಶ್ ಹೆಗ್ಡೆ ಮಾರ್ಮಿಕವಾಗಿ ನುಡಿದರು.

