ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22ನೇ ವರ್ಷದ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು 2026ರ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಪಡುಕುತ್ಯಾರಿನ ಶ್ರೀಮಠದಲ್ಲಿ ನಡೆಯಲಿದೆ.
ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ 2026ರ ಜೂನ್ 18ರಿಂದ ಜುಲೈ 26ರವರೆಗೆ “ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ” ಹಮ್ಮಿಕೊಳ್ಳಲಾಗಿದೆ. ಯಾತ್ರೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರೀ ಬಾಲಸರಸ್ವತೀ ಹೋಮ, ಧಾರ್ಮಿಕ ಕಾರ್ಯಕ್ರಮಗಳು, ಆಶೀರ್ವಚನ ಹಾಗೂ ಅನುಗ್ರಹ ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಯಾತ್ರೆಯ ವೇಳಾಪಟ್ಟಿಯಂತೆ ಜೂನ್ 18ರಂದು ಧಾರವಾಡ, ಜೂನ್ 19ರಂದು ಹೊಸಪೇಟೆ, ಜೂನ್ 21ರಂದು ನವಿಮುಂಬಯಿ, ಜೂನ್ 24ರಂದು ಹುಬ್ಬಳ್ಳಿ, ಜೂನ್ 25ರಂದು ಆನೆಗುಂದಿ, ಜೂನ್ 28ರಂದು ಬಾರ್ಕೂರು, ಜುಲೈ 5ರಂದು ಉಪ್ರಳ್ಳಿ, ಜುಲೈ 10ರಂದು ಮೂಡುಬಿದಿರೆ ಹಾಗೂ ನೆಕ್ಲಾಜೆ, ಜುಲೈ 12ರಂದು ಅಂಕೋಲಾ, ಗೋಕರ್ಣ ಮತ್ತು ಭಟ್ಕಳ, ಜುಲೈ 16ರಂದು ಕೊಲಕಾಡಿ, ಹಳೆಯಂಗಡಿ ಹಾಗೂ ಪಡುಪಣಂಬೂರು, ಜುಲೈ 19ರಂದು ಕೋಟೆಕಾರು–ನೆಲ್ಲಿಸ್ಥಳ, ಬಂಗ್ರಮಂಜೇಶ್ವರ, ಕುಂಬಳೆ, ಮಧೂರು ಹಾಗೂ ಕಾಞಂಗಾಡ್, ಜುಲೈ 24ರಂದು ಮಂಗಳೂರು, ಹಾಗೂ ಜುಲೈ 26ರಂದು ಕಾಪು ಮತ್ತು ಕಟಪಾಡಿ ಕ್ಷೇತ್ರಗಳಿಗೆ ಜಗದ್ಗುರುಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವಾದ ನೀಡಲಿದ್ದಾರೆ.
ಆಯ್ದ ಕ್ಷೇತ್ರಗಳಲ್ಲಿ ಶ್ರೀ ಬಾಲಸರಸ್ವತೀ ಹೋಮಗಳು ನಡೆಯಲಿದ್ದು, ಭಕ್ತಾದಿಗಳಿಗೆ ಜಗದ್ಗುರುಗಳ ಅನುಗ್ರಹ ಮಂತ್ರಾಕ್ಷತೆ ವಿತರಿಸಲಾಗುವುದು. ಜುಲೈ 26ರಂದು ಕಾಪು ಮತ್ತು ಕಟಪಾಡಿಯಲ್ಲಿ ನಡೆಯುವ ಕಾರ್ಯಕ್ರಮಗಳೊಂದಿಗೆ ಸಂಕಲ್ಪ ಯಾತ್ರೆ ಸಮಾಪ್ತಿಗೊಳ್ಳಲಿದೆ.
ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ ಹಾಗೂ ಚಾತುರ್ಮಾಸ್ಯ ವ್ರತಾಚರಣೆಯ ಕಾರ್ಯಕ್ರಮಗಳಲ್ಲಿ ಸಂಬಂಧಿತ ದೇವಸ್ಥಾನಗಳ ಧರ್ಮದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತಾದಿಗಳು ಸಕ್ರಿಯವಾಗಿ ಭಾಗವಹಿಸಿ ಸಹಕರಿಸುವಂತೆ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯು ವಿನಂತಿಸಿದೆ. ಜಗದ್ಗುರುಗಳ ಪಾವನ ಸಾನ್ನಿಧ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆಶೀರ್ವಾದ ಪಡೆಯುವಂತೆ ಸಮಿತಿಯು ಕೋರಿದೆ.
ಈ ಕುರಿತು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ, ಅಧ್ಯಕ್ಷ ವಿ. ಶ್ರೀಧರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್, ಖಜಾಂಚಿ ಅರವಿಂದ ವೈ. ಆಚಾರ್ಯ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಐ. ಲೋಲಾಕ್ಷ ಶರ್ಮಾ
ಸಂಚಾಲಕರು, ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆ
ಮೊ.: 97406 63327.


