ಕಾಪು ದಂಡತೀರ್ಥ ವಿದ್ಯಾಸಂಸ್ಥೆಯ ಪ್ರೌಢ ಮತ್ತು ಕಾಲೇಜು ವಿಭಾಗದ ವಾರ್ಷಿಕೋತ್ಸವ ಸಮಾರಂಭವು ಸಂಚಾಲಕರಾದ ಡಾ. ಕೆ.ಪ್ರಶಾಂತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.ಬಳಿಕ ಮಾತನಾಡಿ ಯಾವುದೇ ವಿದ್ಯಾಸಂಸ್ಥೆಯ ಮಕ್ಕಳು ಕಲಿಕೆ ಮತ್ತು ಪಾಠೇತರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ಮೂಡಿಬರಬೇಕಾದರೆ ಹೆತ್ತವರ ಪ್ರೋತ್ಸಾಹ ಅತ್ಯಗತ್ಯ,ಹಾಗೂ ಯಶಸ್ಸಿಗೆ ಸಹಕರಿಸಿದ ಶಿಕ್ಷಕರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ.ಎಂ.ಸಿ.ಮಣಿಪಾಲದ ವೈದ್ಯರೂ,ಕರ್ನಾಟಕ ರಾಜ್ಯ ಸರ್ಜನ್ಸ್ ಅಸೋಸಿಯೇಷನ್ ನ ಚೇರ್ಮನ್ ಆದ ಡಾ.ರಾಜಗೋಪಾಲ್ ಶೆಣಯ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ,ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಕರು,ಆಡಳಿತ ಮಂಡಳಿ ಹಾಗೂ ಹೆತ್ತವರ ಸಹಕಾರ ಅತ್ಯಗತ್ಯ,ಮತ್ತು ಅವರ ಆಸಕ್ತಿಗೆ ಅನುಗುಣವಾದ ಪ್ರೇರಣೆ ದೊರಕಿದಲ್ಲಿ ಅವರು ಸ್ವಾಭಿಮಾನದ ಬದುಕನ್ನು ನಿರ್ವಹಿಸುತ್ತಾರೆ ಎಂದರು.
ಇನ್ನೋರ್ವ ಅತಿಥಿಯಾದ ಸಾಹಿತಿ,ಅಂಕಣಗಾರ,ಬಾರ್ಕೂರು ನೇಷನಲ್ ಪಿ. ಯು. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ರಾಮಭಟ್ಟ ಸಜಂಗದ್ದೆ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ,ಮಾನವೀಯ ಮೌಲ್ಯ ಉಳಿಸಿ,ಪರಿಶ್ರಮಿಗಳಾಗಿ ಮೂಡಿಬರಬೇಕು, ಹಾಗೂ ವೈದ್ಯಕೀಯ ಕ್ಷೇತ್ರದವರು ಈ ಶಾಲೆಯನ್ನು ಮುನ್ನಡೆಸುವ ಸೌಭಾಗ್ಯ ದೊರಕಿರುವುದು ನಿಜಕ್ಕೂ ಹೆಮ್ಮೆ ಎಂಬ ಸಂದೇಶವನ್ನು ನೀಡಿದರು.
ಅತ್ಯುತ್ತಮ ಸಾಧನೆಗೆ ಕಾರಣರಾದ ಶಿಕ್ಷಕರನ್ನು,ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ ಪಡೆದ ಸಂಚಾಲಕ ಡಾ.ಪ್ರಶಾಂತ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಪ್ರಾಂಶುಪಾಲ ನೀಲಾನಂದ ನಾಯ್ಕ್ ವರದಿವಾಚಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷೆ ಶೋಭಾ ಪ್ರಭಾಕರ ಶೆಟ್ಟಿ,ಸದಸ್ಯೆ ಪನ್ನ ಪಿ. ಶೆಟ್ಟಿ,ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹುಸೇನಬ್ಬ,ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್,ವಿದ್ಯಾರ್ಥಿ ನಾಯಕರುಗಳಾದ ಚಿರಾಗ್ ಮತ್ತು ಜಸಿತ್ ಜೆ.ಸಾಲ್ಯಾನ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸಮರ್ಥ್ ಜೋಶಿ,ನುವೈಮಾ,ಮಂತಸ,ಪ್ರಜ್ಞಾ, ನೌಫಿಯ ನಿರೂಪಿಸಿದರು.


