ಉಡುಪಿ: ಕಾರ್ಮಿಕರು ಪ್ರಯಾಣಿಸುತ್ತಿದ್ದ ಗೂಡ್ಸ್ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟ ಘಟನೆ ಕಾಪು ಸಮೀಪದ ಕೋತಲ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ.
ಕಾಪುವಿನ ಪ್ರಸನ್ನ ಎಂಬವರ ಮಾಲಕತ್ವದ ಈವೆಂಟ್ ಗೆ ಕಾಪು ಮಜೂರಿನಿಂದ ಮಲ್ಪೆಗೆ ಡೆಕರೋಷನ್ ಸಂಬಂಧಿಸಿದ ಸಲಕರಣೆಗಳನ್ನು ಸಾಗಿಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಹತ್ತಿ ಅಲ್ಲಿಂದ ಸರ್ವಿಸ್ ರಸ್ತೆಗೆ ಮುಗುಚಿ ಬಿದ್ದಿದೆ. ಇದರ ಪರಿಣಾಮ ಟೆಂಪೋದಲ್ಲಿದ್ದ ಎಲ್ಲರೂ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ.
ಟೆಂಪೋದಲ್ಲಿ ಒಟ್ಟು ಒಂಭತ್ತು ಮಂದಿ ಕೆಲಸಗಾರರು ಸಾಗುತ್ತಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇವರ ಪೈಕಿ ಇಬ್ಬರು ಸ್ಥಳದಲ್ಲಿ, ಮೂವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.
ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಪಶ್ಚಿಮ ಬಂಗಾಳ ಮಿಡ್ನಾಪುರದ ಕಮಲ್ ಮತ್ತು ಸಮರೇಶ್, ಅಸ್ಸಾಂ ಕಛ್ಹರದ ಪಪ್ಪು ರವಿದಾಸ್ (28) ಮತ್ತು ಹರೀಶ್ (27), ತ್ರಿಪುರಾ ಅಗರ್ತಲದ ಗಪೂನಾಥ್ (50) ವರ್ಷ ಎಂದು ತಿಳಿದು ಬಂದಿದೆ.
ಕೋತಲ್ ಕಟ್ಟೆ ನಿವಾಸಿ ಚಾಲಕ ರಂಜಿತ್ ಪೂಜಾರಿ ಹಾಗೂ ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಉಳಿದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಚಿಕಿತ್ಸೆಯಲ್ಲಿದ್ದಾರೆ.
ಉಡುಪಿ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರು ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಆಸ್ಪತ್ರೆ ಸಾಗಿಸುವಲ್ಲಿ ಸಹಕಾರಿಸಿದ್ದಾರೆ.
ಆಸ್ಪತ್ರೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿ ಗಾಯಾಳುಗಳ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ.
ಕಾಪು ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಕಾಪು ಎಸೈ ತೇಜಸ್ವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

