ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂಡ್ಲೂರಿನಲ್ಲಿ ಪೊಲೀಸ್ ಪೇದೆಯೊಬ್ಬರು ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ವೆಸಗಿರುವ ಘಟನೆ ನಡೆದಿದ್ದು ಈ ಘಟನೆಯನ್ನು ಎಸ್ ಡಿ ಪಿ ಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ, ಈ ಕುರಿತು ಎಸ್ ಡಿ ಪಿ ಐ ಬೈಂದೂರ್ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಗಂಗೊಳ್ಳಿ ಯವರ ನೇತೃತ್ವದಲ್ಲಿ ಎಸ್ ಡಿ ಪಿ ಐ ನಿಯೋಗ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿತು. ಕೆಲ ದಿನಗಳ ಹಿಂದೆ ಸಂತ್ರಸ್ತ ವಿದ್ಯಾರ್ಥಿ ಶಾಲೆಯಿಂದ ಖಾಸಗಿ ಬಸ್ಸಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಬಸ್ರೂರು ಬಿ ಹೆಚ್ ಬಸ್ ನಿಲ್ದಾಣದ ಬಳಿ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ಕಿಶನ್ ಎಂಬುವವರು ಬಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಲಾಠಿಯಿಂದ ವಿಧ್ಯಾರ್ಥಿಯ ಗುಪ್ತಾಂಗಕ್ಕೆ ಹೊಡೆದು ವಿಕೃತಿ ಮೆರೆದಿರುತ್ತಾರೆ. ವಿದ್ಯಾರ್ಥಿ ಈ ಘಟನೆಯ ಕುರಿತು ಮನೆಯಲ್ಲಿ ತಾಯಿಯ ಬಳಿ ಹೇಳಿಕೊಂಡಿದ್ದು ತಾಯಿ ಕುಂದಾಪುರ ಗ್ರಾಮಂತರ (ಕಂಡ್ಲೂರ್) ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ ಆದರೆ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಘಟನೆಯ ಕುರಿತು ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರ ಗಮನಕ್ಕೂ ತಂದಿರುತ್ತಾರೆ. ಇದರಿಂದ ಕುಪಿತನಾದ ಪೊಲೀಸ್ ಪೇದೆ ಕಿಶನ್ ಮರುದಿನ ಶಾಲೆಯಿಂದ ಹಿಂತಿರುಗುತ್ತಿದ್ದ ಸಂತ್ರಸ್ತ ವಿದ್ಯಾರ್ಥಿಯನ್ನು ತಡೆದು ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನನ್ನು ಬೆತ್ತಲೆ ಮೆರವಣಿಗೆ ಮಾಡುತ್ತೇನೆ, ನಿನ್ನ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ಹಾಕುವುದಾಗಿ” ಬೆದರಿಕೆ ಹಾಕಿರುತ್ತಾರೆ. ಈ ಘಟನೆಯಿಂದ ವಿದ್ಯಾರ್ಥಿಯು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು ಮನೆಯಿಂದ ಹೊರಗೆ ಹೋಗಲು ಹಿಂಜರಿಯುತ್ತಿದ್ದಾನೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ (ಕಂಡ್ಲೂರ್) ಠಾಣೆಯಲ್ಲಿ ದೂರು ನೀಡಿದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿ ಕಿಶನ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಬೇಕು ಹಾಗೂ ಅವರನ್ನು ಸೇವೆಯಿಂದ ವಜಾ ಗೊಳಿಸಬೇಕು ತಪ್ಪಿದಲ್ಲಿ ಪಕ್ಷವು ತೀವ್ರತರದ ಹೋರಾಟವನ್ನು ನಡೆಸಲಿದೆ ಎಂದು ಎಸ್ ಡಿ ಪಿ ಐ ಬೈಂದೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಸಿದ್ದೀಕ್ ಗಂಗೊಳ್ಳಿಯವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

