ಉಡುಪಿ ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹ ಅರೋಗ್ಯ ಯೋಜನೆಯ ಮೂಲಕ ಜನಸಾಮಾನ್ಯರ ಮನೆ ಬಾಗಿಲಿಗೆ ಅರೋಗ್ಯ ಸೇವೆಯನ್ನು ತಲುಪಿಸಿ, ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಗೃತ ಆರೋಗ್ಯ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಆಶಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು ಗೃಹ ಅರೋಗ್ಯ ಯೋಜನೆ ಕಾರ್ಯಕ್ರಮದಡಿ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ವಿವಿಧ ತರಹದ ಕ್ಯಾನ್ಸರ್, ಮಾನಸಿಕ ಆರೋಗ್ಯ ಸೇರಿದಂತೆ ಮತ್ತಿತರ ರೋಗ ಲಕ್ಷಣವಿರುವವರನ್ನು ಸ್ಕಾನಿಂಗ್ ಮಾಡಿ, ಅರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಚಿಕಿತ್ಸೆಗೆ ಒಳಪಡಿಸುತ್ತಾರೆ. ಹೆಚ್ಚಿನ ಚಿಕಿತ್ಸೆಗೆ ರೆಫರಲ್ ಸಹ ನೀಡಲಿದ್ದಾರೆ ಎಂದರು. ಸಾರ್ವಜನಿಕರ ಅರೋಗ್ಯಕ್ಕೆ ವಿಶೇಷವಾದ ಒತ್ತನ್ನು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅದರಲ್ಲಿ ಗೃಹ ಆರೋಗ್ಯ ಯೋಜನೆಯೂ ಒಂದಾಗಿದೆ. ಸಮಾಜದ ಸ್ವಾಸ್ಥ ಕಾಪಾಡುವಲ್ಲಿ ಬಹುಮುಖ್ಯ ಸೇವೆ ಒದಗಿಸುತ್ತಿರುವ ಆರೋಗ್ಯ ಇಲಾಖೆಯು ಮುತುವರ್ಜಿ ವಹಿಸಿ, ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ತಿಳಿಸಿದರು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಆದ್ಯತೆಯಾಗಬೇಕು. ಹಿಂದಿನ ದಿನಗಳಿಗೆ ಹೋಲಿಸಿದಾಗ ಇತ್ತೀಚಿನ ಆಹಾರಪದ್ದತಿ, ಒತ್ತಡದ ಜೀವನಶೈಲಿಯಿಂದಾಗಿ ಅರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಕೆಲವರಿಗೆ ತಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವೇ ಇರುವುದಿಲ್ಲ. ಇಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರನ್ನು ಅವರಿರುವೆಡೆಯಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಲು ಗೃಹ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದ ಅವರು, ಕಾಯಿಲೆಗಳು ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಎಚ್ಚರವಹಿಸಬೇಕು ಎಂದರು.

