×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಶರಣಾಗತಿಯ ಭಾವವಿದ್ದಾಗ ಭವಸಾಗರದ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು​~ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಶರಣಾಗತಿಯ ಭಾವವಿದ್ದಾಗ ಭವಸಾಗರದ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು​~ ಶ್ರೀಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು
ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿರುವ ಮನೆ ಮನೆಯಲ್ಲಿ ಭಾಗವತ ಪ್ರವಚನ ಅಭಿಯಾನ ಆಚಾರ್ಯ ಮಧ್ವರ ಆಶ್ರಮ ಗುರುಗಳಾದ ಅಚ್ಯುತ ಪ್ರಜ್ಞರ ಪರಂಪರೆಯಲ್ಲಿ ಬಂದಿರುವ ಭಂಡಾರ ಕೇರಿ ಮಠದ ಈಗಿನ ಪೀಠಾಧಿಪತಿ ಯತಿವರೇಣ್ಯ ಶ್ರೀಶ್ರೀ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ಒಂದು ಅಭೂತಪೂರ್ವ ಪರಿಕಲ್ಪನೆ ಮನೆ ಮನೆ ಭಾಗವತ ಸಂದೇಶ ಜನಪ್ರಿಯವಾಗುತ್ತಿದೆ. ಕಠಿಣ ಸನ್ಯಾಸ ಧರ್ಮದ ಪಾಲನೆ, ತಮ್ಮ ಮಠದ ಪಟ್ಟದ ಆರಾಧ್ಯ ಮೂರ್ತಿ ಶ್ರೀ ಸೀತಾ ಲಕ್ಷ್ಮಣ ಸಹಿತ ಶ್ರೀ ಕೋದಂಡರಾಮಚಂದ್ರನ ನಿತ್ಯ ಉಪಾಸನೆ, ವೇದ ಶಾಸ್ತ್ರಗಳ ನಿರಂತರ ಅಧ್ಯಯನ ಹಾಗೂ ವ್ಯಾಖ್ಯಾನ ದೊಂದಿಗೆ ಹರಿ ಕೀರ್ತನೆಗಳ ರಚನೆಯಿಂದ ಮನೆ ಮಾತಾಗಿರುವ ಶ್ರೀಪಾದರು ತಮ್ಮ ಎಪ್ಪತ್ತರ ಜನ್ಮ ನಕ್ಷತ್ರದ ಸಂದರ್ಭದಲ್ಲಿ ಸಾವಿರದ ಎಂಟು ಮನೆಗಳಲ್ಲಿ ಭಾಗವತ ಪ್ರವಚನ ಅಭಿಯಾನ ಪರಿಕಲ್ಪನೆಗೆ ನಾಂದಿ ಹಾಡಿದ್ದರು. ಇದೀಗ ಸುಮಾರು 854 ಕ್ಕೂ ಅಧಿಕ ಮನೆಗಳಲ್ಲಿ ಭಾಗವತ ಪ್ರವಚನ ನಡೆಸಿಕೊಟ್ಟು ಮನೆ ಮಂದಿ ಭಗವತ್ ಕೃಪೆಗೆ ಪಾತ್ರರಾಗಲು ಸಾಧನರಾಗಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ತಮ್ಮ ಮಠದ ಅನುಯಾಯಿಗಳು ಹಾಗೂ ಭಾಗವತ ಪ್ರವಚನ ಪ್ರಿಯರೊಂದಿಗೆ ಗ್ರಹ ಭಾಗವತ ಪ್ರವಚನ ನಡೆಸುತ್ತಾ ಬಂದಿದ್ದು ಸದ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಮ್ಮ ಭಾಗವತ ಪ್ರವಚನ ಕಾರ್ಯಕ್ರಮ ಮುಂದುವರೆಸುವ ಯೋಜನೆ ಮ್ಮಿಕೊಂಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸರಳ, ಸುಂದರ, ಸುಲಲಿತವಾಗಿ ಭಾಗವತ ಪ್ರವಚನ ನಡೆಸಿಕೊಂಡು ಬರುತ್ತಿರುವ ಶ್ರೀಪಾದರ ಈ ಕೈಕ0ರ್ಯಕ್ಕೆ ಭಕ್ತ ಜನರು ಬಹು ಸಂತಸ ವ್ಯಕ್ತಪಡಿಸಿದ್ದು ಕೊಡವೂರಿನಲ್ಲಿರುವ ಜನಾರ್ದನ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗಳ ಮನೆ ಭಾಮಾದಲ್ಲಿ ನರಸಿಂಹ ಅವತಾರದ ಶ್ರೇಷ್ಠತೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ಪ್ರವಚನ ನಡೆಸಿ ಕೊಟ್ಟರು. ಮನುಷ್ಯ ಜೀವಿಗೆ ಯಾವುದೇ ಸಮಸ್ಯೆ, ಕಷ್ಟ, ನೋವು, ವಿಕಲ್ಪಗಳಿಂದ ತೊಂದರೆ ಆದಾಗ ಭಗವಂತನ ನಾಮಸ್ಮರಣೆ, ಅವನ ಮೇಲೆ ನಿಷ್ಕಳಂಕ ಭಕ್ತಿ ಹಾಗೂ ಅವನಲ್ಲಿ ಪೂರ್ಣ ಶರಣಾಗತಿಯ ಭಾವವಿದ್ದಾಗ ಭವಸಾಗರದ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು, ಸುಖ, ಶಾಂತಿ, ನೆಮ್ಮದಿ, ಮುಕ್ತಿ ಪಡೆಯಬಹುದು ಎಂದು ಬಲು ಸಾರಸ್ಯವಾಗಿ ವಿವರಿಸಿ ಭಕ್ತಾದಿಗಳಿಗೆ ಫಲಮಂತ್ರಾಕ್ಷತೆ ವಿತರಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಶ್ರೀಮಠದ ಅನುಯಾಯಿಗಳಾದ ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣು ಪಾಡಿಗಾರ್, ಶ್ರೀನಿವಾಸ ಬಾದ್ಯ , ಜಯರಾಮ ಆಚಾರ್ಯ, ಚಂದ್ರಶೇಖರ್ ಆಚಾರ್ಯ ರಾಜೇಶ್ ಉಪಾಧ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *