ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಶಿರ್ವ ಶಾಖೆಯು ಸೋಮವಾರ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು ಸ್ಥಳಾಂತರ ಗೊಂಡ ನೂತನ ಶಾಖೆಯನ್ನು ಸಂಘದ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾರವರು ಉದ್ಘಾಟಿಸಿದರು.

”ಅವರು ಈ ಸಂದರ್ಭ ಮಾತನಾಡಿ, ಸಂಘವು 12 ಶಾಖೆಯನ್ನು ಹೊಂದಿದ್ದು, ಇದೀಗಲೇ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದಲಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕಸ್ನೇಹಿಯಾಗಿ ಬ್ಯಾಂಕ್ ಕೆಲಸ ಮಾಡಲಿದೆ“ ಎಂದರು. ನೂತನ ಶಾಖೆಯಲ್ಲಿ ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಲೆಸ್ಲಿ ಸಿ ಡಿ ಸೋಜ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು ಗ್ರಾಹಕರ ಸಹಕಾರದಿಂದ ಬ್ಯಾಂಕ್ ಈ ಮಟ್ಟಕ್ಕೆ ತಲುಪಿದೆ.ಜೋನ್ಸನ್ ಡಿ ಅಲ್ಮೇಡಾ ಮುಂದಾಳತ್ವದಲ್ಲಿ ಹಾಗೂ ನಿರ್ದೇಶಕರ ಅಹರ್ನಿಶಿ ದುಡಿಮೆ ಮತ್ತು ಸಿಬ್ಬಂದಿಯ ಕಾರ್ಯ ದಕ್ಷತೆಯಿಂದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮನೆಮಾತಾಗಿದೆ. ಶಿರ್ವ ಶಾಖೆಯು ಅದೇ ರೀತಿ ಗ್ರಾಹಕ ಸ್ನೇಹಿಯಾಗಿ ಬೆಳೆದು ಜನರಿಗೆ ವರದಾನವಾಗಲಿ“ ಎಂದರು.

ಶ್ರೀ ಕ್ಷೇತ್ರ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಶಾಖೆಯ ಭದ್ರತಾ ಕೊಠಡಿ ಉದ್ಘಾಟಿಸಿದರು. ಅವರು ತಮ್ಮ ಆಶೀರ್ವಚನದಲ್ಲಿ, ಸಮಾಜದಲ್ಲಿ ಸಮಾನತೆ ಅತಿ ಮುಖ್ಯ. ಜಾತಿ ಮತ ಭೇದವಿಲ್ಲದೆ ತಾಳ್ಮೆಯಿಂದ ಸಹನೆಯಿಂದ ಎಲ್ಲರೂ ಸಂತೋಷದಿಂದ ಸಹ ಬಾಳ್ವೆಯಾಗಿ ಜೀವಿಸಬೇಕು. ಜೀವನದಲ್ಲಿ ಮಾನವ ಧರ್ಮ ಮುಖ್ಯವಾಗಿದ್ದು, ಇದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಸಂಸ್ಥೆಯು ಸ್ಥಳೀಯರ ವಿಶ್ವಾಸಗಳಿಸಿದ್ದು, 12 ಶಾಖೆಗಳು ಇದ್ದ ಈ ಸಂಸ್ಥೆ ಮುಂದಿನ ದಿನಗಳಲ್ಲಿ 24 ಶಾಖೆಗಳಾಗಲಿ ಎಂದು ಶುಭ ಹಾರೈಸಿ, ಶಿರ್ವ ಪರಿಸರದ ಈ ರೋಜರಿ ಸೊಸೈಟಿಯು ಎಲ್ಲರ ಸಹಕಾರದಿಂದ ಬೆಳವಣಿಗೆ ಹಾಗೂ ಉನ್ನತ ಮಟ್ಟಕ್ಕೆ ಪ್ರಗತಿಪಥದತ್ತ ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಿರ್ವ ಪರಿಸರದ ಪ್ರತಿಭಾವಂತ ಏಳು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಧನವನ್ನು ನೀಡಲಾಯಿತು. ಹಲವು ಸಂಘ ಸಂಸ್ಥೆಗಳನ್ನು, ಸ್ಥಳೀಯ ನಾಯಕರುಗಳನ್ನು, ಉದ್ಯಮಿಗಳನ್ನು, ರಿಕ್ಷಾ ಚಾಲಕ ಮಾಲಕರನ್ನು, ಸ್ಥಳೀಯ ಪಂಚಾಯತ್ ಅಧಿಕಾರಿ ವರ್ಗದವರನ್ನು ಹೀಗೆ ಸುಮಾರು 65 ಸಂಘಟನೆಯ ಮುಖಂಡರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಶಾಖೆಯ ನಿರ್ದೇಶಕ ಹಾಗೂ ಶಾಖಾ ಸಭಾಪತಿಯವರಾದ ವಿಲ್ಸನ್ ಡಿಸೋಜರವರು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊರವರು ಅತಿಥಿಗಳನ್ನು ಹೂಗುಚ್ಛ ನೀಡಿ ಗೌರವಿಸಿದರು. ಆಲ್ವಿನ್ ದಾಂತಿಯರು ಕಾರ್ಯ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಬಲ್ ಡಿ ಅಲ್ಮೇಡಾರವರು ವಂದಿಸಿದರು.

