×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಅಕ್ಟೋಬರ್ 28 ರಿಂದ ಹಗಲು ರಾತ್ರಿ ಅನಿರ್ಧಿಷ್ಟ ಧರಣಿ : ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧಾರ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್ ಸಂಗ್ರಹ ಸ್ಥಗಿತಗೊಳ್ಳುವವರೆಗೂ ರಾಜಿಯಿಲ್ಲದೆ ಮುಂದುವರಿಸಲು ನಿರ್ಧರಿಸಲಾಗಿದ್ದು‌. ಅಕ್ಟೋಬರ್ 28 ರಿಂದ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ಧಿಷ್ಟ ಕಾಲ ಹಗಲು ರಾತ್ರಿ ಧರಣಿ ನಡೆಸಲು ಇಂದು ಸುರತ್ಕಲ್ ನಲ್ಲಿ ಸೇರಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಾವಿರಾರು ಸಂಖ್ಯೆಯಲ್ಲಿ ಟೋಲ್ ಗೇಟ್ ಮುತ್ತಿಗೆ ಹೋರಾಟದಲ್ಲಿ ಭಾಗವಹಿಸಿ ಒಕ್ಕೊರಲಿನಿಂದ ಆಗ್ರಹಿಸಿದರೂ ಬಿಜೆಪಿ ಸರಕಾರ ಟೋಲ್ ಸಂಗ್ರಹ ಸ್ಥಗಿತಗೊಳಿಸದೆ ಭಂಡತನವನ್ನು ಪ್ರದರ್ಶಿಸಿದೆ. ಪೊಲೀಸ್ ಬಲವನ್ನು ಪ್ರಯೋಗಿಸಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು ಚದುರಿಸಿದೆ. ಇದು ಬಿಜೆಪಿ ಸರಕಾರ ಹಾಗೂ ಸಂಸದ, ಶಾಸಕರುಗಳ ಜನವಿರೋಧಿತನವನ್ನು ಎತ್ತಿತೋರಿಸಿದೆ. ಇದೇ ಸಂದರ್ಭ ಮುತ್ತಿಗೆ ಪ್ರತಿಭಟನೆಗೆ ವ್ಯಾಪಕ ಜನಬೆಂಬಲವನ್ನು ಕಂಡು ಕಂಗೆಟ್ಟು ಹದಿನೈದು, ಇಪ್ಪತ್ತು ದಿನಗಳ ಕಾಲಾವಧಿಯನ್ನು ಟೋಲ್ ಗೇಟ್ ಮುಚ್ಚಲು ನೀಡಬೇಕು ಎಂದು ಸಾರ್ವಜನಿಕವಾಗಿ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೋರಾಟ ಸಮಿತಿಯವರಲ್ಲಿ ಮನವಿ ಮಾಡಿದ್ದರು. ಟೋಲ್ ತೆರವಿಗೆ ಸಂಬಂಧಿಸಿ ಹಲವು ಇದೇ ರೀತಿಯ ಭರವಸೆಗಳನ್ನು ಈ ಹಿಂದೆ ನೀಡಿ ಈಡೇರಿಸದೆ ಇರುವುದರಿಂದ ಜನತೆ ಇವರ ಮಾತುಗಳ ಮೇಲಿನ ನಂಬಿಕೆಯನ್ನು ಪೂರ್ತಿ ಕಳೆದೊಕೊಂಡಿದ್ದಾರೆ. ಈಗಲೂ ಇವರ ಭರವಸೆಗಳನ್ನು ನಂಬಿ ಹೋರಾಟ ಸ್ಥಗಿತಗೊಳಿಸಿದರೆ ಸುರತ್ಕಲ್ ಟೋಲ್ ಸುಲಿಗೆ ಶಾಶ್ವತಗೊಳ್ಳಲಿದೆ‌ ಎಂಬ ಜನಾಭಿಪ್ರಾಯ ಸಾರ್ವತ್ರಿಕವಾಗಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಚರ್ಚಿಸಿದ ಹೋರಾಟ ಸಮಿತಿ ಟೋಲ್ ಗೇಟ್ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿತು. ಜಿಲ್ಲಾಡಳಿತ, ಸಂಸದರ ಕಾಲಮಿತಿ ನವಂಬರ್ 07 ಕ್ಕೆ ಅಂತ್ಯಗೊಳ್ಳುತ್ತದೆ. ಅದಕ್ಕೆ ಹತ್ತು ದಿನ ಮುಂಚಿತವಾಗಿ ಅಕ್ಟೋಬರ್ 28 ಕ್ಕೆ ಅನಿರ್ಧಿಷ್ಟ ಧರಣಿ ಆರಂಭಿಸುವುದು. ಆ ಮೂಲಕ ಸಾರ್ವಜನಿಕವಾಗಿ ವಿನಂತಿಸಿದಂತೆ ನವಂಬರ್ 07 ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಜನಾಭಿಪ್ರಾಯವನ್ನು ಕ್ರೋಢೀಕರಿಸುವ, ಒತ್ತಡವನ್ನು ಸೃಷ್ಟಿಸುವ ಪ್ರಯತ್ನವನ್ನು ಅನಿರ್ಧಿಷ್ಟಾವಧಿ ಧರಣಿಯ ಮೂಲಕ ಮಾಡುವುದು. ಒಟ್ಟು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹೋರಾಟವನ್ನು ಮುಂದುವರಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸಹ ಸಂಚಾಲಕ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ವಹಿಸಿದ್ದರು. ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ಮುಖಂಡರಾದ ಎಂ ದೇವದಾಸ್, ರಘು ಎಕ್ಕಾರು, ಸಾಮಾಜಿಕ ಮುಖಂಡರಾದ ಎಂ ಜಿ ಹೆಗ್ಡೆ, ವೈ ರಾಘವೇಂದ್ರ ರಾವ್, ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ವಿವಿಧ ಸಂಘಟನೆಗಳ ಪ್ರಮುಖರಾದ ಕಿಶನ್ ಕುಮಾರ್ ಕೊಲ್ಕೆಬೈಲು, ವಸಂತ ಬರ್ನಾಡ್, ರಾಜೇಶ್ ಪೂಜಾರಿ ಕುಳಾಯಿ, ದಿನೇಶ್ ಕುಂಪಲ, ಹರೀಶ್ ಪೇಜಾವರ, ಶೇಖರ ಹೆಜಮಾಡಿ, ರಮೇಶ್ ಟಿ ಎನ್, ಶ್ರೀಕಾಂತ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು‌.

ಇತೀ
ಮುನೀರ್ ಕಾಟಿಪಳ್ಳ
ಸಂಚಾಲಕರು, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್

Leave a Reply

Your email address will not be published. Required fields are marked *