ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಸತಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಭವಾನಿ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆ ವತಿಯಿಂದ ಪರ್ಕಳ ಮಾರ್ಕೆಟ್ ಸರ್ಕಲ್ ಸಮೀಪ ನೂತನವಾಗಿ ನಿರ್ಮಿಸಲಾದ ಭವಾನಿ ಎಮರಾಲ್ಡ್ ವಸತಿ ಸಮುಚ್ಚಯದ ಉದ್ಘಾಟನೆ ಶುಕ್ರವಾರ ನಡೆಯಿತು.
ಕಟಪಾಡಿ ಶ್ರೀ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸಾಗಿಸಲು ನಿದ್ದೆ ಬಿಟ್ಟು ಕಠಿನ ಪರಿಶ್ರಮ, ಸಮಯಪ್ರಜ್ಞೆ, ಕೆಲಸದ ಮೇಲಿನ ಪ್ರೀತಿ, ತಲ್ಲೀನತೆ ಹಾಗೂ ಶ್ರದ್ಧೆಯಿಂದ ಪ್ರಯತ್ನಿಸಬೇಕು. ಆಗ ಮಾತ್ರ ಸಾಧನೆಯ ಶಿಖರವೇರಲು ಸಾಧ್ಯ. ಇದಕ್ಕೆ ಸಾಕ್ಷಿಯಾಗಿ ಹಿಂದೆ ಸೆಂಟ್ರಿಂಗ್ ನಾರಾಯಣ ಆಚಾರ್ ಆಗಿದ್ದವರು ಪ್ರಸ್ತುತ ಬಿಲ್ಡರ್ ನಾರಾಯಣ ಆಚಾರ್ ಆಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸೆಂಚುರಿ ಬಿಲ್ಡರ್ ನಾರಾಯಣ ಆಚಾರ್ ಆಗಿ ಗುರುತಿಸಿಕೊಳ್ಳಲಿ ಎಂದು ಹಾರೈಸಿದರು.
ಕಕ್ಕುಂಜೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟಿ, ನಾಗಪಾತ್ರಿ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಮಾತನಾಡಿ, ಗುರುಗಳ ಆಶೀರ್ವಾದ, ದೇವರ ಅನುಗ್ರಹ, ಶುದ್ಧ ಮನಸ್ಸಿನಿಂದ ಮಾಡುವ ಕಾಯಕ ಸದಾ ಯಶಸ್ಸು ತಂದುಕೊಡುತ್ತದೆ. ಸಂಸ್ಥೆ ವತಿಯಿಂದ ಇನ್ನಷ್ಟು ಯೋಜನೆಗಳು ರೂಪುಗೊಂಡು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಹಾರೈಸಿದರು.

ನೂತನ ಸಮುಚ್ಚಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಮಾಂಡವಿ ರಿಯಲ್ ಎಸ್ಟೇಟ್ ಆ್ಯಂಡ್ ಡೆವಲಪರ್ಸ್ ನ ಲಾರಾ ಡಯಾಸ್ ಮಾತನಾಡಿ, ಕಟ್ಟಡವೆಂದರೆ ಕೇವಲ ಇಟ್ಟಿಗೆ, ಸಿಮೆಂಟ್ ಗಳ ನಿರ್ಮಾಣವಲ್ಲ. ಅದರ ಹಿಂದೆ ಪರಿಶ್ರಮ, ಕನಸು, ಸಂಕಲ್ಪವಿರುತ್ತದೆ. ಈ ಸಮುಚ್ಚಯವು ಪರ್ಕಳದ ಅಭಿವೃದ್ಧಿಗೆ ಪೂರಕವಾಗಲಿ ಎಂದು ಆಶಿಸಿದರು.
ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಎ.ಜಿ. ಅಸೋಸಿಯೇಟ್ಸ್ ನ ಮುಖ್ಯಸ್ಥ ಎಂ. ಗೋಪಾಲ ಭಟ್, ಕಾನೂನು ಸಲಹೆಗಾರ ಲಕ್ಷ್ಮಣ ಶೆಣೈಶುಭಾಶಂಸನೆಗೈದರು. ಸ್ಥಳದ ಮಾಲಕ ಮಹೇಶ್ ಹೆಗ್ಡೆ, ಸಂಸ್ಥೆಯ ಪ್ರವರ್ತಕರಾದ ಭವಾನಿ ನಾರಾಯಣ ಆಚಾರ್, ಪುನೀತ್ ಕುಮಾರ್, ಗಣ್ಯರು, ಹಿತೈಷಿಗಳು ಉಪಸ್ಥಿತರಿದ್ದರು. ಶ್ರೀಶ ಆಚಾರ್ ನಿರೂಪಿಸಿ, ವಂದಿಸಿದರು.
ಸಂಸ್ಥೆಯ ಪ್ರವರ್ತಕ ನಾರಾಯಣ ಆಚಾರ್ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯು ಈವರೆಗೆ 6 ಯೋಜನೆಗಳನ್ನು ಅಂತಿಮಗೊಳಿಸಿದ್ದು, ಕೆಲವೇ ಫ್ಲ್ಯಾಟ್ ಗಳು ಮಾರಾಟಕ್ಕೆ ಲಭ್ಯವಿವೆ. ಈಗ ವಾಸ್ತವ್ಯಕ್ಕೆ ಯೋಗ್ಯವಾಗಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ವಸತಿ ಖರೀದಿದಾರರ ಅಗತ್ಯತೆ, ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಭವಾನಿ ಎಮರಾಲ್ಡ್ ವಸತಿ ಸಮುಚ್ಚಯವು ಪರ್ಕಳ ಪರಿಸರದಲ್ಲಿ ಹೊಸ ವಸತಿ ಆಯ್ಕೆಯಾಗಿ ಮೂಡಿಬರಲಿದೆ. ಮುಂದಿನ ಯೋಜನೆಯಾದ ಭವಾನಿ ಪರ್ಲ್ ಸ್ಟೋನ್ನ ಕಾಮಗಾರಿಯು ಮಣಿಪಾಲದ ಸರಳೇಬೆಟ್ಟಿನಲ್ಲಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಭವಾನಿ ಪರ್ಲ್ ಸ್ಟೋನ್ ಫ್ಲ್ಯಾಟ್ಗಳಿಗೆ ಮುಂಗಡ ಪಾವತಿ ಮಾಡಿದ್ದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ರಿಯಾಯಿತಿ ಲಭ್ಯವಿದೆ ಎಂದು ತಿಳಿಸಿದರು.

