ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ 23.12.2024 ರಂದು ‘ಅಪರಾಧ ತಡೆ ಮಾಸಾಚರಣೆ’ ಅಂಗವಾಗಿ ಕಾಪು ಪೋಲೀಸ್ ಠಾಣೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಪು ಠಾಣಾಧಿಕಾರಿ ತೇಜಸ್ವಿ ಯವರು ಪ್ರಸ್ತುತ ಸಮಯದಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಸಮರ್ಪಕ ಮಾಹಿತಿಗಳನ್ನು ನೀಡಿದರು. ಹದಿಹರೆಯದಲ್ಲಿ ವಿದ್ಯಾರ್ಥಿಗಳು ಕುತೂಹಲಭರಿತರಾಗಿ, ಹಾಗೂ ಕಾನೂನುಗಳ ಬಗ್ಗೆ ಅರಿವು ಮತ್ತು ಮಾರ್ಗದರ್ಶನವಿಲ್ಲದೆ ವಿಭಿನ್ನ ಪ್ರಕಾರದ ತಪ್ಪೆಸಗುತ್ತಾರೆ, ಇದರಿಂದಾಗಿ ಹೆತ್ತವರು ಸಹಿತ ಶಿಕ್ಷೆಗೊಳಗಾಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಸೆಳತಕ್ಕೆ ಬಲಿಯಾಗದೆ ತಮ್ಮ ಶೈಕ್ಷಣಿಕ ಬದುಕನ್ನು ಸುಂದರಗೊಳಿಸಿ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗ ಬೇಕೆಂಬ ಸಂದೇಶವನ್ನು ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲ ನೀಲಾನಂದ ನಾಯ್ಕ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಶೆಟ್ಟಿ ವಂದಿಸಿದ ಕಾರ್ಯಕ್ರಮವನ್ನು ಶಿಕ್ಷಣ ಸಂಯೋಜಕ ಶಿವಣ್ಣ ಬಾಯರ್ ನಿರೂಪಿಸಿದರು.

