ಕಾಪು: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ಅಮಾನತುಗೊಂಡಿದ್ದಾರೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಠಾಣಾಧಿಕಾರಿಯವರನ್ನು ಅಮಾನತುಗೊಳಿಸಿದ್ದರು. ಆದರೆ ಅಕ್ರಮ ಮರಳುಗಾರಿಕೆ ನಡೆಸಲು ಕಾಪು ಠಾಣಾಧಿಕಾರಿಯವರು ಸಹಕರಿಸಿದ್ದಾರೆ ಎಂಬುದನ್ನು ತಿಳಿಸುವ ಆಡಿಯೋವೊಂದು ಎಸ್ಪಿ ಡಾ. ಅರುಣ್ ಅವರಿಗೆ ಲಭಿಸಿದ್ದು, ಈ ಆಡಿಯೋವನ್ನು ಕಾರ್ಕಳ ಡಿವೈಎಸ್ಪಿ ಅರವಿಂದ್ ಕಲ್ಲುಗುಜ್ಜಿಯವರ ಮೂಲಕ ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿಯವರ ವರದಿಯಲ್ಲಿ ಕಾಪು ಠಾಣಾಧಿಕಾರಿ ವಿರುದ್ದದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ, ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮರಳುಗಾರಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಅಧಿಕಾರಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

