ಪಡುಬಿದ್ರಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗಳ ಸಹಕಾರದೊಂದಿಗೆ 50ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಜೇಸಿಐ ಪಡುಬಿದ್ರಿ ಆತಿಥ್ಯದಲ್ಲಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಮತ್ತು ಮುಖ್ಯ ಬೀಚ್‌ಗಳಲ್ಲಿ ನ. 23 ಹಾಗೂ 24ರಂದು ವಿವಿಧ ಕ್ರೀಡೆಗಳು, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗಳ ಅನಾವರಣಗೊಳಿಸುವುದಕ್ಕಾಗಿ ‘ಬ್ರಾಂಡ್ ಪಡುಬಿದ್ರಿ’ ಮೂಲಕ ಜನತೆಗಾಗಿ ತೆರೆದುಕೊಳ್ಳಲಿರುವ ಪಡುಬಿದ್ರಿ ಬೀಚ್ ಕಾರ್ನಿವಲ್ 2024ನ ಉದ್ಘಾಟನೆಯನ್ನು ರಾಜ್ಯ ಮೀನುಗಾರಿಕಾ, ಬಂದರು ಸಚಿವ ಮಂಕಾಳ ವೈದ್ಯ ಅವರು ನ.23ರಂದು ಸಂಜೆ 6 ಗಂಟೆಗೆ ನೆರವೇರಿಸಲಿರುವುದಾಗಿ ಪಡುಬಿದ್ರಿ ಜೇಸಿಐ ಅಧ್ಯಕ್ಷ ಸಂಜೀತ್ ಎರ್ಮಾಳ್ ಅವರು ತಿಳಿಸಿದರು. ಅವರು, ಕಾಪು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ನ. 23ರಂದು ಬೆಳಿಗ್ಗೆ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಯೋಜನೆಯಲ್ಲಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ 2, 3 ಹಾಗೂ 5 ಕಿಮೀಗಳ ರಾಷ್ಟ್ರೀಯ ಜೂನಿಯರ್, ಸೀನಿಯರ್ ಓಪನ್ ವಾಟರ್ ಸೀ ಸ್ವಿಮ್ಮಿಂಗ್ ಸ್ಪರ್ಧೆಗಳು ನಡೆಯಲಿವೆ. ನ. 24ರಂದು ಬೆಳಿಗ್ಗೆ ಉಡುಪಿ ರನ್ನರ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಮುಕ್ತ ಹಾಗೂ ವಿಶೇಷ ಬರಿಗಾಲಲ್ಲಿ ಸಮುದ್ರ ತೀರದ ಮ್ಯಾರಾಥಾನ್ ಓಟವನ್ನು ಸಂಘಟಿಸಲಾಗಿದೆ. ಇವುಗಳಲ್ಲದೇ ಬೀಚ್ ಕಬಡ್ಡಿ, ಗಾಳ ಹಾಕಿ ಹಾಗೂ ಸಾಂಪ್ರದಾಯಿಕ ಮೀನು ಹಿಡಿಯುವ ಸ್ಪರ್ಧೆ, ಅಮ್ಯೂಸ್‌ಮೆಂಟ್ ಗೇಮ್ಸ್, ಸೀ ವಾಟರ್ ಸರ್ಫಿಂಗ್ ಮುಂತಾದ ಸಾಹಸೀ ಕ್ರೀಡೆಗಳನ್ನೂ ಆಯೋಜಿಸಲಾಗಿದೆ. ಅಂದು ಸಂಜೆ ಸ್ಥಳೀಯ ಪ್ರತಿಭೆಗಳ ಅನಾವರಣದೊಂದಿಗೆ ಆರಂಭಗೊಳ್ಳುವ ಸಭಾವೇದಿಕೆಯಲ್ಲಿ ಸಂಜೆ 5ಗಂಟೆಗೆ ಪಡುಬಿದ್ರಿ ಜೇಸಿಐನ 50ನೇ ಸಂಭ್ರಮಾಚರಣೆಯೂ ನಡೆಯಲಿದೆ. ಜೇಸಿಐ ಇಂಡಿಯಾದ ರವಿಶಂಕರ್ ಸತ್ಯಮೂರ್ತಿ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು ಎಂದೂ ಅವರು ತಿಳಿಸಿದರು.

