ಉಚ್ಚಿಲ: ದ.ಕ.ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿನವರಾತ್ರಿ ಪ್ರಯಕ್ತ ನಡೆದ ಉಚ್ಚಿಲ ದಸರಾ-2024ರ ದಸರಾ ದಿನದಂದು ಶೋಭಾಯಾತ್ರೆ ಮತ್ತು ದಶ ಮೂರ್ತಿಗಳ ವಿಸರ್ಜನೆ ಯಶಸ್ವಿಯಾಗಿ ಕಾಪುವಿನ ಕಡಲ ಕಿನಾರೆಯಲ್ಲಿ ತೆರೆ ಗೊಂಡಿತು . ನವದುರ್ಗೆಯರ ಸಹಿತ ಶಾರದಾ ಮೂರ್ತಿಗೆ ಮಹಾಪೂಜೆಯ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನ ಮಾಡಲಾಯಿತು. ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ, ಎರ್ಮಾಳು ಮಸೀದಿವರೆಗೆ ಸಾಗಿ ಅಲ್ಲಿಂದ ಯೂ ಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪುವರೆಗೆ ಸಾಗಿ, ಕಾಪು ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡ ಭಾಗದ ಬೀಚ್ ರಸ್ತೆಗೆ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ. ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿಯು ಮುಂಭಾಗದಲ್ಲಿ ಸಾಗಿ, ಶ್ರೀ ಶಾರದಾ ದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳು ನಾಡಿನ ಸಂಸ್ಕೃತಿ ಬಿಂಬಿಸುವ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾ ತಂಡ ಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು ಭಕ್ತಾದಿಗಳ ಜತೆಗೆ ಶೋಭಾಯಾತ್ರೆ ಸಾಗಿತು. ಜಲಸ್ತಂಭನದ ಪೂರ್ವದಲ್ಲಿ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆದ ನಂತರ ಸೇರಿದ ಸಾವಿರಾರು ಸುಮಂಗಲೆಯರಿಂದ ಸಾಮೂಹಿಕ ಮಹಾಮಂಗಳಾರತಿ ನೆರವೇರಿದ ನಂತರ ಸಮುದ್ರದ ಮಧ್ಯೆ ಏಕಕಾಲದಲ್ಲಿ ನವದುರ್ಗೆ -ಶಾರದಾ ಮಾತೆ ಸಹಿತ ವಿಗ್ರಹಗಳ ಜಲಸ್ತಂಭನ ನಡೆಸಿದರು. ಸುಡುಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಡಾ। ಜಿ. ಶಂಕರ್, ಪ್ರಮುಖರಾದ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ ಸುವರ್ಣ, ವಿನಯ್ ಕರ್ಕೇರ,ಶಾಸಕ ಯಕ್ಸಾಲ್ ಸುವರ್ಣ,ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


