ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನಡೆಯುತ್ತಿರುವ ‘ಉಡುಪಿ ಉಚ್ಚಿಲ ದಸರಾ’ದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಸರಸ್ವತಿ ಮಂದಿರ ಪ್ರೌಢ ಶಾಲೆಯ ಮೈದಾನದಲ್ಲಿ ರವಿವಾರ ಬೆಳಗ್ಗೆ ಪ್ರಥಮ ಬಾರಿಗೆ ನಡೆದ ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯನ್ನು ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಉದ್ಘಾಟಿಸಿದರು ಬಾಲಕರ, ಬಾಲಕಿಯರ, ಪುರುಷರ, ಮಹಿಳೆಯರ ವಿಭಾಗದಲ್ಲಿ ಕುಸ್ತಿ ಸ್ಪರ್ಧೆ ನಡೆಯಿತು. ಉಡುಪಿ ಉಚ್ಚಿಲ ದಸರಾ ಪ್ರಯುಕ್ತ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆದ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುರುಷರ ವಿಭಾಗದಲ್ಲಿ ಉಡುಪಿ ಉಚ್ಚಿಲ ದಸರಾ ಕೇಸರಿ 2024, ಉಡುಪಿ ಉಚ್ಚಿಲ ದಸರಾ ಕುಮಾರ್ 2024, ಮಹಿಳೆಯರ ವಿಭಾಗದಲ್ಲಿ ಉಚ್ಚಿಲ ದಸರಾ ಕುವರಿ 2024 ಬಿರುದಿನೊಂದಿಗೆ ಬೆಳ್ಳಿ ಗದೆ ಪ್ರಶಸ್ತಿ ಹಾಗೂ ವಿವಿಧ ತೂಕದ ವಿಭಾಗದ ಸ್ಪರ್ಧೆಯ ವಿಜೇತರಿಗೆ ನಗದು ಸಹಿತ ಬಹುಮಾನ ವಿತರಿಸಲಾಯಿತು. 10 ಕೆಟಗರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 242 ಮಂದಿ ಸ್ಪರ್ಧಾಳುಗಳು ವೀರ ಮಾರುತಿ ವ್ಯಾಯಾಮ ಶಾಲೆ ಮಂಗಳೂರು ಬೇಂದ್ರೆ, ಬ್ರದರ್ಸ್ ಯುವಕ ಮಂಡಲ ಉಳ್ಳಾಲ, ಮೋಹನ್ ಬೇಂದ್ರೆ ಮತ್ತು ಕುಟುಂಬದವರು ಕ್ರಮವಾಗಿ ದಸರಾ ಕೇಸರಿ, ದಸರಾ ಕುಮಾರ್ ಮತ್ತು ದಸರಾ ಕುವರಿ ಪರ್ಯಾಯ ಬೆಳ್ಳಿ ಗದೆಯನ್ನು ಪ್ರಾಯೋಜಿಸಿದ್ದಾರೆ. ಶಂಕರಪ್ಪ, ಸತೀಶ್ ಬೇಂದ್ರೆ, ಸಂದೀಪ್ ರಾವ್ ವಿನೋದ್ ಕುಮಾರ್. ಮೋಹನ್ ಬೇಂದ್ರೆ, ರಾಜು ಪಲ್ಕೆ, ಪ್ರಮೋದ್, ಸ್ವಪ್ನ ತೀರ್ಪುಗಾರರಾಗಿ ಸಹಕರಿಸಿದ್ದರು. ಕುಸ್ತಿ ಪಂದ್ಯಾಟದ ಸಂಘಟಕರಾದ ವಿಜಯ್ ಸುವರ್ಣ ಕುಳಾಯಿ ಸ್ವಾಗತಿಸಿ, ಪುಂಡಲೀಕ ಹೊಸಬೆಟ್ಟು ವಂದಿಸಿದರು. ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು.


