×
Our website is made possible by displaying online advertisements to our visitors. Please consider supporting us by whitelisting our website.
  • 9880645340

ಬಿಜೆಪಿ ಕುಟುಂಬ ರಾಜಕಾರಣದ ಪಿತಾಮಹ – ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವ್ಯಂಗ್ಯ

ಕುಟುಂಬ ರಾಜಕಾರಣದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಿದ್ದ ಬಿಜೆಪಿಗರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ‌ ಪುತ್ರ ಬಿ
ವೈ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ನೈಜ ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷ ಕುಟುಂಬ ರಾಜಕಾರಣದ ಪಿತಾಮಹ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಪಕ್ಷವೆಂದರೆ ಸಿದ್ದಾಂತಗಳನ್ನು ನಂಬಿಕೊಂಡು ಬದುಕುವ ಕಾರ್ಯಕರ್ತರ ಪಕ್ಷವಾಗಿದ್ದು ಎಂದಿಗೂ ಕೂಡ ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ನಳಿನ್ ಕುಮಾರ್ ಕಟೀಲ್, ಬಿ.ಎಸ್ ಯಡಿಯೂರಪ್ಪ ಅವರು ಸದಾ ಹೇಳಿಕೊಂಡು ಬಂದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು 6 ತಿಂಗಳು ಕಳೆದರೂ ಕೂಡ ಸೂಕ್ತ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಯ ದೆಹಲಿ ನಾಯಕರಿಗೆ ಸಾಧ್ಯವಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹಲವು ಘಟಾನುಘಟಿಗಳ ಹೆಸರು ಕೇಳಿಬಂದರೂ ಕೂಡ ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆದರಿಕೆಗೆ ಮಣಿದು ಅವರ ಪುತ್ರನನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದು ಕುಟುಂಬ ರಾಜಕಾರಣವಲ್ಲದೇ ಮತ್ತೇನು? ಸದಾ ಹರಕಲು ಬಾಯಿಯಂತೆ ಕಾಂಗ್ರೆಸ್ ಪಕ್ಷದ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಸಿ.ಟಿ ರವಿ, ಸುನೀಲ್ ಕುಮಾರ್ ಅವರು ನೂತನ ಅಧ್ಯಕ್ಷರ ನೇಮಕವನ್ನು ಸಹಿಸುವರೇ? ಈಗಾಗಲೇ ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿರುವ ಬಿ.ಎಸ್ ಯಡಿಯೂರಪ್ಪ ಅವರು ಕುಟುಂಬದಲ್ಲೇ ಈಗಾಗಲೇ ಒರ್ವ ಪುತ್ರನನ್ನು ಸಂಸದ, ವಿಜಯೇಂದ್ರ ಅವರನ್ನು ಶಾಸಕ ಹಾಗೂ ಸದ್ಯ ರಾಜ್ಯಾಧ್ಯಕ್ಷ ಮಾಡಿರುವುದು ನೋಡಿದಾಗ ಬಿಜೆಪಿ ಪಕ್ಷ ತನ್ನ ನೈಜ ಸಿದ್ದಾಂತವನ್ನು ಮರೆತು ಕಾರ್ಯಕರ್ತ ಕೇಂದ್ರಿತ ಪಕ್ಷವಾಗಿರದೇ ವ್ಯಕ್ತಿ ಕೇಂದ್ರಿತ ಪಕ್ಷವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಕುಟುಂಬ ರಾಜಕಾರಣವನ್ನೇ ಮಾಡಿಕೊಂಡು ಕೌಟಂಬಿಕ ಪಕ್ಷವಾಗಿರುವ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಕೂಡ ತನ್ನ ಪಕ್ಷವನ್ನು ಮುಂದಿನ ದಿನಗಳಲ್ಲಿ ಕೌಟಂಬಿಕ ಪಕ್ಷವೆಂದು ಹೆಸರು ಬದಲಾಯಿಸಿಕೊಳ್ಳಬೇಕಾಗುವ ಪರಿಸ್ಥಿತಿ ಬರುವ ಲಕ್ಷಣಗಳು ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು ಅದರ ಮೊದಲಾದರೂ ಒರ್ವ ಸಮರ್ಥ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವ ಗಟ್ಟಿತನವನ್ನು ಬಿಜೆಪಿ ನಾಯಕರು ತೋರಿಸಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *